ಮುಂಬೈ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೆ ಒಂದು ವರ್ಷವಾಯಿತು. 2023ರ ಏಕದಿನ ವಿಶ್ವಕಪ್ ನಲ್ಲಿ ಗಾಯಗೊಂಡಿದ್ದ ಶಮಿ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಶಮಿ ಮರಳಿದ್ದು, ಭಾರತ ತಂಡವನ್ನು ಕೂಡಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಮೊಹಮ್ಮದ್ ಶಮಿ ಅವರ ಆಯ್ಕೆ ಮಾಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದು ಸದ್ಯ ಕಷ್ಟದ ಕೆಲಸ ಎನ್ನುತ್ತಿದೆ ವರದಿ.
ಶಮಿ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವೈದ್ಯಕೀಯ ತಂಡವು ತೀವ್ರ ನಿಗಾ ವಹಿಸುತ್ತಿದೆ. ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯವೊಂದನ್ನು ಆಡಿದ್ದ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಬಳಿಕ ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಕೂಟದಲ್ಲಿ ಶಮಿ ಆಡುತ್ತಿದ್ದಾರೆ. ಆದರೆ ಅವರು ತನ್ನ ದೇಹತೂಕ ಇಳಿಸಿಕೊಳ್ಳಬೇಕು ಮತ್ತು ಇನ್ನೂ ಫಿಟ್ ಆಗಬೇಕಿದೆ ಎಂದು ಮೆಡಿಕಲ್ ತಂಡ ಸೂಚಿಸಿದೆ.
“ಅವರು ಬೌಲಿಂಗ್ ಮಾಡುವ ಪ್ರತಿ ಸ್ಪೆಲ್ ನಂತರ ಅವರಿಗೆ ವೈದ್ಯಕೀಯ ತಂಡದ ಚಿಕಿತ್ಸೆ ನೀಡುತ್ತಿದೆ. ಶಮಿ ಅದರ ಮೇಲಿನ ಅವಲಂಬನೆಯನ್ನು ಯಾವಾಗ ಬಿಡಬಹುದು ಎಂಬುದನ್ನು ನೋಡಲಾಗುತ್ತಿದೆ” ಎಂದು ಬಿಸಿಸಿಐ ಮೂಲ ತಿಳಿಸಿದೆ.“ಶಮಿ ಪಂದ್ಯಗಳನ್ನು ಆಡುತ್ತಿರುವುದರಿಂದ ಅವರು ತೂಕ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ ಎಂದು ವೈದ್ಯಕೀಯ ತಂಡ ಅಂದಾಜಿಸುತ್ತಿದೆ. ಇದು ಅವರ ಸಹಿಷ್ಣುತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಣಜಿ ಟ್ರೋಫಿ ಲೆಗ್ ಮುಗಿದಿರುವುದರಿಂದ, ಮೊದಲ ಸುತ್ತಿನ SMAT ಪಂದ್ಯಗಳನ್ನು ತಾತ್ಕಾಲಿಕ ಮಾನದಂಡವಾಗಿ ಇರಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಶಮಿ ಟೀಂ ಇಂಡಿಯಾಗೆ ಸದ್ಯಕ್ಕೆ ಮರಳುವುದು ಕಷ್ಟ ಎಂದು ವರದಿ ಹೇಳಿದೆ.“SMAT ನಲ್ಲಿ ಟಿ20 ಪಂದ್ಯಗಳಲ್ಲಿ ಎರಡು-ಓವರ್ ಸ್ಪೆಲ್‌ಗಳನ್ನು ಬೌಲಿಂಗ್ ಮಾಡುವುದು ಸೂಕ್ತ ಮಾನದಂಡವಲ್ಲ. ಉನ್ನತ ಮಟ್ಟದ ಟೆಸ್ಟ್ ಸರಣಿಯಲ್ಲಿ ತೀವ್ರತೆಯನ್ನು ಕಾಯ್ದುಕೊಳ್ಳುವುದು ವಿಭಿನ್ನವಾದ ಆಟವಾಗಿದೆ. ಅವರು SMAT ಸವಾಲು ಪೂರ್ಣಗೊಳಿಸಿದರೆ ಅವರನ್ನು ಟೀಮ್ ಇಂಡಿಯಾದೊಂದಿಗೆ ತರಬೇತಿಗೆ ಕಳುಹಿಸುವ ಅವಕಾಶವಿದೆ. ಆಯ್ಕೆದಾರರು ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಜಾಗರೂಕರಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.