ಉಡುಪಿ: ಕರಾವಳಿಯಲ್ಲಿ ಮೀನುಗಾರಿಕೆಗೆ ಋತು ಆರಂಭದಲ್ಲೇ ವಿಘ್ನ ಎದುರಾಗಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ಬೋಟುಗಳು ಲಂಗರು ಹಾಕುವಂತಾಗಿದೆ. ಗಾಳಿ ಹಾಗೂ ನೀರಿನ ಒತ್ತಡ ಒಂದು ಕಡೆಯಾದರೆ, ಕಷ್ಟಪಟ್ಟು ಮೀನುಗಾರಿಕೆ ನಡೆಸುವ ಬೋಟುಗಳಿಗೂ ಮೀನು ಸಿಗದೆ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆಗಸ್ಟ್ ಒಂದರಿಂದ ಆಳಸಮುದ್ರ ಸಹಿತ ಎಲ್ಲ ವಿಧದ ಬೋಟುಗಳು ಉತ್ಸಾಹದಿಂದ ಸಮುದ್ರಕ್ಕೆ ಇಳಿದಿದ್ದವು. ಆದರೆ ಶೇ. 95ರಷ್ಟು ಬೋಟುಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಕ್ಕಿಲ್ಲ. ಇನ್ನೊಂದೆಡೆ ಏಷ್ಯಾದಲ್ಲೇ ಅತಿ ದೊಡ್ಡ ಸರ್ವ ಋತು ಬಂದರು ಖ್ಯಾತಿಯ ಮಲ್ಪೆ ಮೀನುಗಾರಿಕೆ ಬಂದರು ಈಗ ಅಕ್ಷರಶಃ ಸ್ತಬ್ಧವಾಗಿದ್ದು, ಅದರ ಪರಿಣಾಮ ಕರಾವಳಿಯ ಆರ್ಥಿಕತೆಯ ಮೇಲೆ ಬೀಳುತ್ತಿದೆ. ಮಲ್ಪೆ ಬಂದರಿನಲ್ಲೇ ದಿನಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಸುಮಾರು 50 ಸಾವಿರ ಮಂದಿ ಪ್ರತ್ಯಕ್ಷ – ಪರೋಕ್ಷವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿದ್ದಾರೆ.
ಕಳೆದ 15 ದಿನಗಳಲ್ಲಿ ಕೋಟ್ಯಂತರ. ರೂ. ನಷ್ಟ ಅಂದಾಜಿಸಲಾಗಿದೆ. 25 ವರ್ಷಗಳಿಂದ ಋತು ಆರಂಭದಲ್ಲಿ ಮೀನಿನ ಕ್ಷಾಮ ಎದುರಾಗಿಲ್ಲ. ಮಾಹಿತಿ ಪ್ರಕಾರ ಒಂದೆರಡು ದಿನಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಬರಲಿದ್ದು, ಗಣೇಶ ಚತುರ್ಥಿ ಬಳಿಕ ಉತ್ತಮ ಮೀನುಗಾರಿಕೆಯ ನಿರೀಕ್ಷೆ ಇದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.