ಮಂಗಳೂರು: ಯುಎಇ ಮೂಲದ ಖ್ಯಾತ ಸಂಗೀತಗಾರ, ಗಿಟಾರ್ ವಾದಕ ಮತ್ತು ಗಾಯಕ ಗೋಪಿ ಕಾಮತ್ ಅವರ ಖ್ಯಾತ ರೆಟ್ರೊ ಬಾಲಿವುಡ್ ಮೆಲೋಡಿಗಳ ಸಂಗೀತ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗೌರವಾನ್ವಿತ
ವಾಯೊಲಿನ್ ವಾದಕ ರಂಗ ಪೈ ಮತ್ತು ಪ್ರತಿಭಾವಂತ ಮರಾಠಿ ಹಿನ್ನೆಲೆ ಗಾಯಕಿ ಅನುಷ್ಕಾ ಚಡ್ಡಾ ಸೇರಿದಂತೆ ಬಾಲಿವುಡ್ನ ನುರಿತ ಸಂಗೀತಗಾರರ ತಂಡದೊಂದಿಗೆ ಕಾಮತ್ ಅವರು ‘ಎವರ್ಗ್ರೀನ್ ಮೆಲೋಡೀಸ್’ ನೊಂದಿಗೆ ಸಂಗೀತಾಸಕ್ತರನ್ನು ಮೋಡಿಗೊಳಿಸಲಿದ್ದಾರೆ ಎಂದು ಜೆರಿ ಡಿಮೆಲ್ಲೊ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವು ಮಾರ್ಚ್ 9 ರಂದು ಮಂಗಳೂರಿನ ಹೋಟೆಲ್ ಮೋತಿ ಮಹಲ್ನ ಕನ್ವೆನ್ಷನ್ ಹಾಲ್ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ ಎಂದರು.
ಗೋಪಿ ಕಾಮತ್ ಅವರು ಬಹುಮುಖ ಸಂಗೀತ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಗಾಯನ, ಗಿಟಾರ್, ಕೀಬೋರ್ಡ್ ಮತ್ತು ಹಾರ್ಮೋನಿಕಾದೊಂದಿಗೆ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದರು.
ಪ್ರಧಾನವಾಗಿ ಸಂಗೀತದ ಸುವರ್ಣ ಯುಗದ ರೆಟ್ರೊ ಹಾಡುಗಳನ್ನು ಹಾಡಲಿದ್ದಾರೆ. ಪ್ರೇಕ್ಷಕರೊಂದಿಗೆ ಆಳವಾಗಿ ಬೆಸೆಯಲಿರುವ ಭಾವಪೂರ್ಣ ಸಾಹಿತ್ಯಕ್ಕೆ ಹೆಸರುವಾಸಿಯಾದ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಾಮತ್ರವರು ಹಿಂದಿ ಮೆಲೋಡಿಗಳಿಗೆ ಮಾತ್ರ ಸೀಮಿತವಾಗಿಲ್ಲದೆ, ರೆಟ್ರೊ ಇಂಗ್ಲಿಷ್ ಹಾಡುಗಳ ಆಕರ್ಷಕ ಪ್ರದರ್ಶನಗಳನ್ನು ಸಹ ನೀಡಲಿದ್ದಾರೆ. ಉಡುಪಿ ಮೂಲದ ಅವರು, ಕನ್ನಡ, ತುಳು ಮತ್ತು ಕೊಂಕಣಿ ಹಾಡುಗಳ ಸಮೃದ್ಧ ಮಿಶ್ರಣದೊಂದಿಗೆ ವಿಶಿಷ್ಟವಾದ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.
ಪ್ರದರ್ಶಕ ಮತ್ತು ಸಂಯೋಜಕರಾಗಿ, ಕಾಮತ್ ಪ್ರೇಕ್ಷಕರಿಗೆ ಹಾಸ್ಯ ಮತ್ತು ಉತ್ಸಾಹದ ಸಂವಾದದೊಂದಿಗೆ ಆಕರ್ಷಕ ಮತ್ತು ಸಂವಾದಾತ್ಮಕ ಅನುಭವವನ್ನು ನೀಡಲಿದ್ದಾರೆ. 14 ದೇಶಗಳಲ್ಲಿ ಪ್ರಸ್ತುತಗೊಂಡಿರುವ ಅವರ ಪ್ರದರ್ಶನಗಳು ನಿರಂತರವಾಗಿ ಜನಮನಗಳನ್ನು ಸೆಳೆಯುತ್ತಿದ್ದು, ವಿಶೇಷವಾಗಿ ಯುಎಇಯಲ್ಲಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಕಾಗೋಷ್ಠಿಯಲ್ಲಿ ಗೋಪಿ ಕಾಮತ್ , ರೀನಾ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.