ಮಂಗಳೂರು: ಅಪ್ರಾಪ್ತೆ ಮತ್ತು ವಿವಾಹಿತೆಯು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದುದನ್ನು ತನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿದ ತೋಟ ಬೆಂಗ್ರೆ ನಿವಾಸಿ ರಂಶೀದ್ ಎಂಬಾತನ ಆರೋಪವು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -1 (ಪೊಕ್ಸೊ)ದಲ್ಲಿ ಸಾಬೀತಾಗಿದೆ. ಆರೋಪಿಗೆ ನ್ಯಾಯಾಲಯವು ಐದು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ
ದಂಡ ವಿಧಿಸಿ ತೀರ್ಪು ನೀಡಿದೆ.
2024ರ ಜುಲೈ 5 ಮತ್ತು 7ರಂದು ರಾತ್ರಿ ಆರೋಪಿಯು ಅಪ್ರಾಪ್ತೆ ಮತ್ತು ಮಹಿಳೆ ಸ್ನಾನ ಮಾಡುತ್ತಿದ್ದುದನ್ನು ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದ ಎನ್ನಲಾಗಿದೆ.
ಜು.16ರಂದು ಇನ್ನೊಂದು ಮನೆಯ ಟೆರೇಸ್ ಮೇಲೆ ವೀಡಿಯೋ ಮಾಡುವ ಉದ್ದೇಶದಿಂದ ಹೋಗಿದ್ದ. ಅದನ್ನು ಆ ಮನೆಯವರು ಗಮನಿಸಿ ಯಾರೆಂದು ಕೂಗಿ ಕೇಳಿದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದ. ಆವಾಗ ಆರೋಪಿಯ ಮೊಬೈಲ್ ಕೆಳಗೆಬಿದ್ದಿತ್ತು. ಅದನ್ನು ವಶಪಡಿಸಿಕೊಂಡ ಮನೆಯವರು ಆತನನ್ನು ಪತ್ತೆ ಹಚ್ಚಿ ಆತನ ಮೂಲಕವೇ ಮೊಬೈಲ್ನ ಲಾಕ್ ತೆಗೆಸಿದಾಗ ಬಾತ್ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೀಡಿಯೋ ಕಂಡು ಬಂದಿದೆ.ಅದರಂತೆ ಆತನ ವಿರುದ್ಧ ನೀಡಿದ ದೂರಿನ ಮೇರೆಗೆ ಜು.17ರಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಭಾಗಶಃ ತನಿಖೆಯನ್ನು ಪಣಂಬೂರು ಠಾಣೆಯ ಎಸ್ಸೈಗಳಾದ ರಾಘವೇಂದ್ರ ಮತ್ತು ಶ್ರೀಕಲಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -1 (ಪೊಕ್ಸೊ)ಯ ನ್ಯಾಯಾಧೀಶ ವಿನಯ್ ದೇವರಾಜ್ ಅವರು ಆರೋಪಿ ರಂಶೀದ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಎನ್ಎಸ್ ಸೆಕ್ಷನ್ 329 (3)ರಡಿ 3 ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ, ಸೆಕ್ಷನ್ 329 (4)ರಡಿ 1 ವರ್ಷದ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದಲ್ಲಿ 2 ತಿಂಗಳು ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆ ಕಲಂ 14ರಡಿ 5 ವರ್ಷಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷ ಹೆಚ್ಚು ವರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಸಂತ್ರಸ್ತರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧಿಶರು ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.
5 ತಿಂಗಳಲ್ಲೇ ತೀರ್ಪು ಪ್ರಕಟ :ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 5 ತಿಂಗಳಲ್ಲಿಯೇ ಈ ತೀರ್ಪು ಪ್ರಕಟವಾಗಿದೆ. ಆರೋಪಿಯ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಮೊಬೈಲ್ನಲ್ಲಿ ಆತನೇ ವೀಡಿಯೋ ಮಾಡಿರುವುದು, ವೀಡಿಯೋದಲ್ಲಿರುವ ಸಂತ್ರಸ್ತೆಯ ಚಿತ್ರಗಳು ಹೊಂದಿಕೆಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ನ್ಯಾಯಾಲಯದ ಮುಂದೆ ಈ ರೀತಿಯ 14 ಪೊಕ್ಸೊ ಪ್ರಕರಣಗಳು ವಿಚಾರಣೆ ಬಂದಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ.
ಯುವ ಜನತೆ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ಚಿತ್ರೀಕರಣ ಮಾಡುವುದರಿಂದ ಆಗುವ ಪರಿಣಾಮಗಳು ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯು ತಾಲೂಕು ಮಟ್ಟದಲ್ಲಿ ತಾಲೂಕು ವಕೀಲರನ್ನು ಒಳಗೊಂಡಂತೆ (ಪುರುಷ ಮತ್ತು ಮಹಿಳಾ) ವಿವಿಧ ಕ್ಷೇತ್ರಗಳ 6 ಮಂದಿಯ ಸಮಿತಿ ರಚಿಸಿ ತಾಲೂಕು ಮಟ್ಟದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಜಾಗೃತಿ ಕಾರ್ಯ ಕ್ರಮಗಳನ್ನು ಆಯೋಜಿಸಬೇಕು ಎಂದು ನ್ಯಾಯಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.