ಮಂಗಳೂರು: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅಂಬ್ಯುಲೆನ್ಸ್’ನಂತೆ ಬಸ್ ನಲ್ಲಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಕೂಳೂರು ಮಾರ್ಗ 13 ಎಫ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಏಕಾಏಕಿ ಹೃದಯಾಘಾತದ ಲಕ್ಷಣಗಳು ಕಾಣಿಸಿದ್ದು, ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದ್ದಾರೆ. ಬಸ್ನಲ್ಲಿದ್ದ ಎಮರ್ಜೆನ್ಸಿ ಸೈರನ್ ಆನ್ ಮಾಡಿ ಕೇವಲ 6 ನಿಮಿಷಗಳಲ್ಲಿ 6 ಕಿಲೋಮೀಟರ್ ದೂರ ಕ್ರಮಿಸಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಿ ಆಕೆಯ ಜೀವ ಉಳಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಗೆ ಮತ್ತು ಮಾನವೀಯತೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.