ಉಡುಪಿ: ಮನೆಗೆ ಬೀಗ ಹಾಕಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬೈಂದೂರು ಉಪ್ಪುಂದ ನಿವಾಸಿಗಳಾದ ಯತಿರಾಜ್, ಮಹೇಶ್ ಯಳಜಿತ್ ಹಾಗೂ ನಾಗೂರು ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನಲ್ಲಿರುವ ಜನಾರ್ದನ ಎಂಬವರು ಮಾ.10ರಂದು ರಾತ್ರಿ ಮನೆಗೆ ಬೀಗ ಹಾಕಿ ಮನೆ ಸಮೀಪದ ಯಕ್ಷಗಾನ ಕಾರ್ಯಕ್ರಮಕ್ಕೆ ಮನೆಯವರೊಂದಿಗೆ ಹೋಗಿದ್ದರು. ಯಕ್ಷಗಾನ ಕಾರ್ಯಕ್ರಮ ಮುಗಿಸಿ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ಬಂದು ನೋಡುವಾಗ ಯಾರೋ ಮನೆಯ ಬಾಗಿಲು ಮುರಿದು ಮನೆಯೊಳಗೆ ಹೋಗಿ ಕೊಠಡಿಯ ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್ ಟ್ಯಾಪ್ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಾಗಿತ್ತು.

ತನಿಖೆಗೆ ಇಳಿದ ಬೈಂದೂರು ಪೊಲೀಸರು, ಆರೋಪಿಗಳನ್ನು ಬಂಧಿಸಿ ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್ಟಾಪ್ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್ ಗಳು ಸೇರಿ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.












