ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆಯಾಡಲಾಗಿದೆ.
ಮೃತದೇಹವನ್ನು 30 ತುಂಡುಗಳನ್ನಾಗಿ ಕತ್ತರಿಸಿದ ಪಾಪಿ:
ಹತ್ಯೆಯಾದ ಮಹಿಳೆಯನ್ನು ಮಹಾಲಕ್ಷ್ಮಿ(29) ಎಂದು ಗುರುತಿಸಲಾಗಿದ್ದು, ಮಲ್ಲೇಶ್ವರಂನ ವೈಯಾಲಿಕಾವಲ್ನಲ್ಲಿರುವ ಅವರ ಫ್ಲಾಟ್ನಲ್ಲಿ ಕೊಲೆಯ ಬಳಿಕ ಮೃತದೇಹವನ್ನು 30 ತುಂಡುಗಳನ್ನಾಗಿ ಕತ್ತರಿಸಿ ಒಂದೇ ಬಾಗಿಲಿನ 165-ಲೀಟರ್ ಫ್ರಿಡ್ಜ್ ನಲ್ಲಿಡಲಾಗಿದೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.
ರೆಫ್ರಿಜರೇಟರ್ನಲ್ಲಿ ಮೃತದೇಹ ಪತ್ತೆ:
ಐದು ವರ್ಷಗಳ ಹಿಂದೆ ಪತಿ ಹೇಮಂತ್ ದಾಸ್ ನಿಂದ ಬೇರ್ಪಟ್ಟಿದ್ದ ಮಹಾಲಕ್ಷ್ಮಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು ಮತ್ತು ವೀರಣ್ಣ ಭವನ ಸಮೀಪದ ಪೈಪ್ ಲೈನ್ ರಸ್ತೆಯ 6ನೇ ಕ್ರಾಸ್ ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಅವರ ನಾಲ್ಕು ವರ್ಷದ ಮಗಳು ದಾಸ್ ಅವರೊಂದಿಗೆ ವಾಸಿಸುತ್ತಿದ್ದರು. ಮಗಳು ತಾಯಿಯೊಂದಿಗೆ ಸಮಯ ಕಳೆಯಲು ಪ್ರತಿ ಹದಿನೈದು ದಿನಗಳಿಗೊಮ್ಮೆ ಮಹಾಲಕ್ಷ್ಮಿಗೆ ಭೇಟಿಗೆ ದಾಸ್ ಆಗಮಿಸುತ್ತಿದ್ದರು. ಆದರೆ ಸೆಪ್ಟೆಂಬರ್ 2 ರ ನಂತರ, ಮಹಾಲಕ್ಷ್ಮಿ ಅವರ ಫೋನ್ ಸ್ವಿಚ್ ಆಫ್ ಆಗಿತ್ತು, ಮತ್ತು ದಾಸ್ ಶನಿವಾರ ತಮ್ಮ ಮಗಳೊಂದಿಗೆ ಪತ್ನಿಯನ್ನು ನೋಡಲು ಬಂದಿದ್ದರು. ಈ ವೇಳೆ ನೆರೆಹೊರೆಯವರು ಮಹಾಲಕ್ಷ್ಮಿ ಅವರ ಫ್ಲಾಟ್ನಿಂದ ದುರ್ವಾಸನೆ ಬರುತ್ತಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಮಹಾಲಕ್ಷ್ಮಿ ಅವರ ತಾಯಿ ಮತ್ತು ಸಹೋದರಿಗೆ ಮಾಹಿತಿ ನೀಡಿದ್ದಾರೆ. ನಂತರ ದಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಮನೆಗೆ ಆಗಮಿಸಿ ಬಾಗಿಲನ್ನು ಒಡೆದು ನೋಡಿದಾಗ, ರೆಫ್ರಿಜರೇಟರ್ನಲ್ಲಿ ಮೃತದೇಹ ಪತ್ತೆಯಾಗಿದೆ.
ದೇಹವನ್ನು ಫ್ರಿಡ್ಜ್ನಿಂದ ಹೊರ ತೆಗೆದ ಬಳಿಕ ದೇಹದ ತುಂಡುಗಳ ಲೆಕ್ಕ ಬರೆದುಕೊಂಡಿದ್ದು, 30 ಪೀಸ್ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಮೃತ ದೇಹ ಮತ್ತು ಸ್ಥಳ ಪರಿಶೀಲನೆ ಮುಕ್ತಾಯವಾಗಿದ್ದು, ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಬಂಧನಕ್ಕಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.