ಉಡುಪಿ: ಕೃಷ್ಣನಗರಿಯ ರಥಶಿಲ್ಪಿಗಳಿಗೆ ವಿಶೇಷ ಬೇಡಿಕೆ ಇದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಅನೇಕ ದೇವಾಲಯಗಳಿಗೆ ಉಡುಪಿಯ ಶಿಲ್ಪಿಗಳೇ ಮರದ ಹಾಗೂ ವಿವಿಧ ಲೋಹದ ಅನೇಕ ರಥಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ ಉಡುಪಿಯಲ್ಲಿ ನಿರ್ಮಾಣವಾಗಿದೆ.
ಇದನ್ನು ಚಂದ್ರಮಂಡಲ ರಥ ಎಂದು ಕರೆಯಲಾಗುತ್ತದೆ. ಈ ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯ ರವರು ತಮ್ಮ ತಂಡದ ಜೊತೆ ರಚಿಸಿದ್ದಾರೆ.
ಸುಮಾರು 22 ದಿನ ನಿರಂತರ ಬೆಳ್ಳಿಯ ಕುಸುರಿ ಕೆಲಸದೊಂದಿಗೆ ರಥವನ್ನು ನಿರ್ಮಿಸಲಾಗಿದೆ. ಇಲ್ಲಿನ ರಾಯರ ಮಠದ ಸನ್ನಿಧಿಯಲ್ಲಿ ನಿರ್ಮಿಸಿ ಕೊಟ್ಟಿದ್ದು, ಈ ಪುಷ್ಪ ರಥದ ನಿರ್ಮಾಣ ವೆಚ್ಚವು ಸುಮಾರು 80 ಲಕ್ಷ ಆಗಿರುತ್ತದೆ.