ಉಡುಪಿ: ಜಿಲ್ಲೆಯ ಬೀಚ್‌ಗಳ ಸಮಗ್ರ
ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯ ತಯಾರಿಯಲ್ಲಿ ಪ್ರವಾಸಿಗರ ಜೀವಹಾನಿ ಸಂಭವವನ್ನು ತಡೆಗಟ್ಟಲು ಒತ್ತು ನೀಡುವುದರೊಂದಿಗೆ, ಯೋಜನೆಯನ್ನು ರೂಪಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಡಲತೀರಗಳಿಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಬೀಚ್‌ಗಳ ಸ್ಥಳೀಯ ಭೌಗೋಳಿಕ ಪ್ರದೇಶದ ಮಾಹಿತಿ ಕೊರತೆಯಿಂದ ಜೀವಹಾನಿಗಳು ಉಂಟಾಗುತ್ತವೆ. ಈ ಬಗ್ಗೆ ಪ್ರವಾಸಿಗರಿಗೆ ಸರ್ವಋತುಗಳಲ್ಲಿ ಸ್ಥಳೀಯ ಭೌಗೋಳಿಕ ಮಾಹಿತಿ ನೀಡುವುದು, ಅವರ ಭದ್ರತೆ,
ಸುರಕ್ಷತೆ ಸೇರಿದಂತೆ ಮೂಲಸೌಲಭ್ಯಗಳ ವ್ಯವಸ್ಥೆಗಳನ್ನು ಕಲ್ಪಿಸುವುದನ್ನು ಒಳಗೊಂಡಂತೆ ಯೋಜನೆಯನ್ನು ರೂಪಿಸಬೇಕು ಎಂದರು.
ಜಿಲ್ಲೆಯ ಪ್ರಾಕೃತಿಕ, ಧಾರ್ಮಿಕ ಪ್ರವಾಸೋದ್ಯಮಗಳ ಬಗ್ಗೆ ದೇಶ ವಿದೇಶಗಳಲ್ಲಿ ಪ್ರಚಾರ ಪಡಿಸುವ ಮಾಹಿತಿಯನ್ನು ಒಳಗೊಂಡ ನೂತನ ವೆಬ್‌ಸೈಟ್ ಅನ್ನು ಸೃಜನಪಡಿಸಬೇಕು.ಇದರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರಗಳು, ಅಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳು, ಕರಾವಳಿಯ ಪರಂಪರೆ,
ಮಾರ್ಗಸೂಚಿಗಳು ಹಾಗೂ ನೆರೆಹೊರೆ ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿಯನ್ನು ಒಳಗೊಂಡಂತೆ ರಚಿಸಿದ್ದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದನ್ನು ಆಗಿಂದಾಗ್ಗೆ ಉನ್ನತೀಕರಣಗೊಳಿಸುವುದರ ಜೊತೆಗೆ ನಿರ್ವಹಣೆಯನ್ನು ಮಾಡಬೇಕೆಂದು ತಿಳಿಸಿದರು.
ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾನ ಬೀಚ್ ಬಳಿ ವಿಶೇಷ ಪ್ರವಾಸೋದ್ಯಮ ವಲಯವನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು 80 ಎಕ್ರೆ ಜಮೀನನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಯಾರಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಬೇಕೆಂದು ಸೂಚನೆ ನೀಡಿದರು.
ಕುಂದಾಪುರದ ಕೋಡಿಯ ಸೀವಾಕ್ ಪಕ್ಕದಲ್ಲಿ ಕೋಡಿ ಬೀಚ್‌ನ ಪಕ್ಕದಲ್ಲಿ 26 ಎಕ್ರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ, ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ
ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಸ್ಥಳವನ್ನು ಶೀಘ್ರದಲ್ಲಿಯೇ ಪ್ರವಾಸೋದ್ಯಮ ಇಲಾಖೆಗೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧತ ಚಟುವಟಿಕೆ ನಡೆಸುವ ಮುನ್ನ ಕೆ.ಟಿ.ಟಿ.ಎಫ್ ಕಾಯ್ದೆಯನ್ವಯ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈವರೆಗೂ ಕೆಲವು ಭಾಗೀದಾರರು ನೋಂದಣಿ ಮಾಡಿರುವುದಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಜಿಲ್ಲೆಯ
ಕಡಲತೀರಗಳ ಪ್ರವಾಸೋದ್ಯಮವನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲು ಸೂಚನೆ ನೀಡಿದ್ದು, ಇದರ ಅನುಷ್ಠಾನಕ್ಕೆ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯ ಪ್ರವಾಸೋದ್ಯಮದ ಜೊತೆಗೆ ಪ್ರವಾಸಿಗರು, ಕೃಷಿ,ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಮತ್ತಿತರ ಚಟುವಟಿಕೆಗಳ ಅನುಭವಗಳನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸುವುದರೊಂದಿಗೆ ಈ ಬಗ್ಗೆ ಪ್ರಚಾರ ಪಡಿಸಬೇಕು ಎಂದರು.
ಈಗಾಗಲೇ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಇವುಗಳನ್ನು ಆದ್ಯತೆಯ ಮೇಲೆ ಶೀಘ್ರದಲ್ಲಿಯೇ
ಪೂರ್ಣಗೊಳಿಸಬೇಕು. ಸರಕಾರಕ್ಕೆ ಕಳುಹಿಸಿರುವ
ಪ್ರಸ್ತಾವನೆಗಳನ್ನು ಅನುಸರಿಸಿ, ಅನುಮೋದನೆ ಪಡೆದು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಸಂಚಾರ ಬೆಳೆಸಲು ಅನುಕೂಲವಾಗುವಂತೆ ರೂಟ್‌ಮ್ಯಾಪ್
ಗಳನ್ನೊಳಗೊಂಡ ಫಲಕಗಳನ್ನು ಅಲ್ಲಲ್ಲಿ
ಪ್ರದರ್ಶಿಸಬೇಕು ಹಾಗೂ ನಿಖರ ದಾರಿಯಲ್ಲಿ ಸಂಚರಿಸುವ ಸೈನ್‌ಬೋರ್ಡಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಡಿಎಫ್‌ಓ
ಗಣಪತಿ, ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ್
ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.