ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ – ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.
ಯೋಗ ಪ್ರೊಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಪೋಸ್ಟರ್ ತಯಾರಿಕೆ, ವಿಡೀಯೋ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಯೋಗ ವಿಭಾಗದ ಡೀನ್ ಡಾ.ಅರ್ಚನಾ ಇದ್ದರು. ವಿಭಾಗದ ವಿದ್ಯಾರ್ಥಿಗಳು ನೆರೆಹೊರೆಯ ಶಾಲಾ- ಕಾಲೇಜುಗಳಲ್ಲಿ ಕಳೆದ 10 ದಿನಗಳು ಯೋಗ ತರಬೇತಿಯನ್ನು ಉಚಿತವಾಗಿ ನಡೆಸಿಕೊಟ್ಟರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ 50 ವಿದ್ಯಾರ್ಥಿಗಳು ಜಿಲ್ಲಾ ಆಯುಷ್ ವಿಭಾಗವು ಮಂಗಳೂರಿನ ಪುರಭವನದಲ್ಲಿ
ಹಮ್ಮಿಕೊಂಡ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.