♥ ಸುನಿಲ್
ತಡಬಡಿಸಿ ತಡವರಿಸಿಕೊಂಡು ಬರೆಯುತ್ತಿರುವೆ ಒಂದೆರಡು ಸಾಲುಗಳ, ಈ ಪ್ರೇಮ ನಿವೇದನಾ ಓಲೆಯ, ಬರೆದಿರುವ ಪತ್ರ ಬರಿಯ ಹಾಳೆಯೆಂದು ಕೈಗೆ ಸಿಕ್ಕಕೂಡಲೆ ಹರಿದು ಎಸೆಯದಿರು, ಅಚ್ಚುಕಟ್ಟಾಗಿ ಬರೆಯಲು ಬಾರದಿದ್ದರು ಏನೋ ಒಂದಿಷ್ಟು ಯೋಚಿಸಿಕೊಂಡು ಬರೆದಿರುವ ನನ್ನ ಮೊದಲ ಪ್ರೇಮ ಪತ್ರವಿದು.
ನಸುಗೆಂಪಿನ ಸಂಜೆಯಲಿ, ಮೋಡಗಳ ಮುಸುಕಿನ ಸೂರ್ಯನ ಎದುರಲ್ಲಿ, ತಂಗಾಳಿಗೆ ಮೈಯೊಡ್ಡಿ ಕುಳಿತು, ತುಸು ಹೊತ್ತು ಕಣ್ಮುಚ್ಚಿ ಕುಳಿತಾಗ ಮನಸ್ಸ ಪರದೆಯ ಮೇಲೆ ಹಾದು ಹೋದ ಬಯಕೆಗಳ ಬಣ್ಣಿಸಿಕೊಂಡು ಬರೆದಿರುವೆ ನಿನಗಾಗಿ ಈ ಓಲೆಯ.
ಕಾಮನಬಿಲ್ಲಿನ ಬಣ್ಣಗಳ ಚಿತ್ತಾರದೆದುರು ಕೂಡ ಹೊಳೆಯಬಲ್ಲ ನಿನ್ನಂದಕೆ ಮರುಳಾದೆನಾ, ಬೆಳದಿಂಗಳ ಚೆಲ್ಲುವ ಪೂರ್ಣ ಚಂದಿರನ ನಾಚಿಸುವ ನಿನ್ನ ಕಣ್ಗಳಲಿ ನನ್ನ ಪ್ರತಿಬಿಂಬವ ಕಾಣುವಾಸೆ ಎನಗೆ, ಬಲ್ಲೆಯ ಚೆಲುವೆ ನಿನ್ನಂದವ ನೀ? ವರ್ಣಿಸುವೆ ಕೇಳು ಈ ನನ್ನ ಓಲೆಯಲಿ,
ನಸು ಬೆಳಕಿನ ತುಸುಮುಂಜಾವಿನ ಇಬ್ಬನಿಯು ಗಲ್ಲದ ಮೇಲೆ ಬಿದ್ದು ಜಾರುವಂತ ಓಮುದ್ದು ಕೋಮಲೆ, ಚಿಲಿಪಿಲಿ ಚಿಂವ್ಗುಟ್ಟುವ ಗುಬ್ಬಿಗಳ ಕಲರವಕೆ ಸರಿಸಾಟಿಯು ನಿನ್ನ ಸ್ವರವು,
ನವಿಲಿನ ಚೂಪುಕಣ್ಣುಗಳ ಚೆಲುವೆಯೇ, ಕಪ್ಪುಕಾಡಿಗೆಯು ಶೋಭಿಸಿತು ಈ ನಿನ್ನ ನಯನಗಳ ನೆಪದಲಿ,
ಮಧುವ ಕದ್ದವು ಜೇನುಗಳು ನಿನ್ನ ಈ ಕೆಂದುಟಿಯ ಮೇಲೆ ಕುಳಿತು, ಮೂಗೊಂದು ಶೋಭಿಸಿತು ಪುಷ್ಪ ಮೊಗ್ಗಿನಂತೆ.
ಸುಕೋಮಲ ತ್ವಚೆಯ ಓ ಬೆಡಗಿಯೆ ಕೇಳು,
ಜಗತ್ತಿನ ಪರಿಪೂರ್ಣ ಅಂದ ಚಂದಗಳ ತಾಳೆ ಹಾಕಿ ಕೂಡಿಸಿ, ಗುಣಿಸಿ, ಭಾಗಿಸಿ ಉತ್ತರವ ತಂದರೂ ನಿನ್ನೆದುರು ಅದು ಶೂನ್ಯವೆನಿಸಿತು,
ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು ಘಲ್ಲುಘಲ್ಲೆಂದು ನೀ ನಡೆದು ಬರಲು ಸಪ್ತಸ್ವರಗಳಾದವು ಮೌನ.
ಪದಪುಂಜಗಳ ಒಟ್ಟುಗೂಡಿಸಿ ನಿನ್ನಂದವ ಹೊಗಳಲು ದಿನ ಸಾಲದು ಓ ಚದುರೆ, ನಿನ್ನ ಕಂಡಾಗಲೆಲ್ಲ ಪ್ರೀತಿ ಬಯಕೆ ಬೆಟ್ಟದಷ್ಟು ಬೆಳೆದು ನಿಂತಾವು. ಬಳಿ ನಿಂತು ಪಿಸುಗುಟ್ಟಿದರೆ, ಎದೆಯ ಗುಡಿಗಂಟೆ ಬಾರಿಸಿದಂತೆ, ತುಸು ನಾಚಿ ನೀ ನಕ್ಕಾಗ, ಮನ ಕರಗಿ ಸೆರೆಯಾಯಿತು ನಿನ್ನಲ್ಲಿ
ಬಳಿ ಬಂದು ಮೈಸೋಕಿ ನೀ ಹೊರಡಲು, ನಿಂತಲ್ಲೇ ಬೊಂಬೆಯಾದೆ ನಾ
ಹೇಯ್ ತುಂಟಕಣ್ಣಿನ ಒಂಟಿ ಬೆಡಗಿಯೆ,
ನನ್ನಾಸೆಯ ಬಯಕೆಗಳ ರಥ ಕಟ್ಟಿಕಾದಿರುವೆ, ನೀನೆ ಅದಕೆ ಸಾರಥಿಯು,
ಓ ಹೃದಯದರಸಿಯೆ,
ಚಿತ್ತಾರದ ರೂಪರಾಶಿಯೆ,
ಈ ನನ್ನ ಜೀವಮಾನದ ಖುಷಿಯೆ
ಸೂಚಿಸುವೆಯ ಸಮ್ಮತಿಯ?
ಇಲ್ಲ, ಎಂದು ಮನ ನೋಯಿಸಬೇಡ.
ಹುಂ, ಎಂದು ಸಮ್ಮತಿಸುವುದ ಮರೆಯಬೇಡ.