ನಿಟ್ಟೆ ವಿವಿಯ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ

ಕಾರ್ಕಳ: ಶಿಕ್ಷಣವು ವ್ಯಕ್ತಿಯ ಜ್ಞಾನ, ಕೌಶಲ್ಯಗಳನ್ನು ಸುಧಾರಿಸುತ್ತದೆ. ಜತೆಗೆ ವ್ಯಕ್ತಿತ್ವ ಮತ್ತು ಮನೋಭಾವವನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಶ್ರೀರಾಮ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ಗೋವಿಂದ ರೇವಣ್ಕರ್ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ತಾಲೂಕಿನ ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್ ನ ಸದಾನಂದ ಸಭಾಂಗಣದಲ್ಲಿ ನಡೆದ ಹದಿನಾಲ್ಕನೆಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ‘ನಾವು ಅಂದುಕೊಂಡದ್ದು ನಡೆದೇ ನಡೆಯುತ್ತದೆ ಎನ್ನಲಾಗದು. ಅಂದುಗೊಂಡಂತಹ ಕಾರ್ಯ ನಡೆಯದಿದ್ದರೆ ಧೃತಿಗೆಡದೆ ಮುನ್ನಡೆಯಬೇಕು. ಶಿಕ್ಷಣ ಎಂಬುದು ಪ್ರತಿ ಸಮಾಜದ ಅಡಿಪಾಯ ಮತ್ತು ಉತ್ತಮ ನಾಳೆಗೆ ನಾಂದಿಯಾಗುತ್ತದೆ ಎಂದು ಅವರು ಹೇಳಿದರು.

ಸಹಕುಲಾಧಿಪತಿ ಡಾ. ಎಂ ಶಾಂತರಾಂ ಶೆಟ್ಟಿ ಅವರು ‘ಶಿಕ್ಷಣವು ಕತ್ತಲೆಯಲ್ಲಿ ನ ಬೆಳಕಿನ ಕಿರಣವಿದ್ದಂತೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಗುಣ ನಡತೆಯನ್ನು ನೀಡುವುದು ಶಿಕ್ಷಣ ಸಂಸ್ಥೆಯ ಆದ್ಯಕರ್ತವ್ಯ. ಪೋಷಕರು, ವಿದ್ಯೆ ಕಲಿಸಿದ ಗುರುಗಳು, ವಿದ್ಯಾಲಯ ಹಾಗೂ ನಮ್ಮ ಜನ್ಮಭೂಮಿಯು ನಮ್ಮ ಏಳಿಗೆಗೆ ಕಾರಣ ಎಂಬುದನ್ನು ನಾವು ಮರೆಯಬಾರದು’ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸಹಕರಿಸಿದ ಹಲವರನ್ನು ನೆನೆಯುವುದು ನನ್ನ ಕರ್ತವ್ಯ ಎಂಬುದನ್ನು ನಾನು ಭಾವಿಸುತ್ತೇನೆ. ನಿಟ್ಟೆ, ಮಂಗಳೂರು ಹಾಗೂ ಬೆಂಗಳೂರಿನ ಎಲ್ಲಾ ಕ್ಯಾಂಪಸ್ ಗಳಲ್ಲಿ ಒಟ್ಟು 14000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದು ನಿಟ್ಟೆ ವಿದ್ಯಾ ಸಂಸ್ಥೆಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ನಿಟ್ಟೆ ಸಮೂಹ ಸಂಸ್ಥೆಗಳ ಹುಟ್ಟು ಹಾಗೂ ಬೆಳವಣಿಗೆಗೆ ನನ್ನ ತಾಯಿ ಶ್ರೀಮತಿ ಮೀನಾಕ್ಷಿ ಹೆಗ್ಡೆಯವರ ಸ್ಪೂರ್ತಿಯೇ ಕಾರಣ ಎಂಬುದನ್ನು ನಾನು ನಂಬುವೆನು’ ಎಂದರು.

ಕುಲಪತಿ ಡಾ. ಎಂ ಎಸ್ ಮೂಡಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿ ‘ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ಒದಗಿಸಲು, ನಾವೀನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಬೆಳವಣಿಗೆ ಮತ್ತು ಪ್ರಗತಿಯ ಹಾದಿಯಲ್ಲಿ ಮುಂದುವರಿಯುವ ಸಲುವಾಗಿ, ನಾವು 2029-2030 ರಲ್ಲಿ ನಮ್ಮ ಸುವರ್ಣ ಮಹೋತ್ಸವವನ್ನು ಸಮೀಪಿಸುತ್ತಿರುವಾಗ ವಿಶ್ವವಿದ್ಯಾಲಯವು “ಪ್ರಾಜೆಕ್ಟ್ ವೃದ್ಧಿ – ಕಾರ್ಯತಂತ್ರದ ಯೋಜನೆ 2030” ಅನ್ನು ಪ್ರಾರಂಭಿಸಿದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ ವಿಶಾಲ್ ಹೆಗ್ಡೆ, ಫೈನಾನ್ಸ್ & ಪ್ಲಾನಿಂಗ್ ವಿಭಾಗದ ನಿರ್ದೇಶಕ ರಾಜೇಂದ್ರ ಎಂ, ಐಎಸ್.ಆರ್ & ಸಿಆರ್.ಎಲ್ ವಿಭಾಗದ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಕುಲಸಚಿವ ಡಾ. ಹರ್ಷಾ ಹಾಲಹಳ್ಳಿ, ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಬಿ ಶೆಟ್ಟಿ, ನಿಟ್ಟೆ ಆಫ್ ಕ್ಯಾಂಪಸ್ ನ ವಿವಿಧ ಕಾಲೇಜುಗಳ ಮುಖ್ಯಸ್ಥರು, ಎಕಾಡೆಮಿಕ್ ಕೌಂಸಿಲ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 311 ವಿದ್ಯಾರ್ಥಿಗಳ ಪೈಕಿ 29 ಮಂದಿಗೆ ಮಾಸ್ಟರ್ ಆಫ್ ಟೆಕ್ನಾಲಜಿ, 120 ಮಂದಿಗೆ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು 162 ಮಂದಿಗೆ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪ್ರಮಾಣಪತ್ರವನ್ನು ನೀಡಲಾಯಿತು. ವಿದ್ಯಾರ್ಥಿನಿ ಶ್ರದ್ಧಾ ಉಪಾಧ್ಯಾಯ ಪ್ರಾರ್ಥಿಸಿದರು. ಡಾ. ಸುಧೀರ್ ರಾಜ್ ಹಾಗೂ ಡಾ.ಹರ್ಷಿತಾ ಜತ್ತನ್ನಾ ಕಾರ್ಯಕ್ರಮ ನಿರೂಪಿಸಿದರು.