ನಾಲ್ಕು ದಶಕಗಳಿಂದ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕಲಾಶಿಕ್ಷಕ

ಶೇಖರ್ ಪೂಜಾರಿ ಕಲ್ಮಾಡಿಯವರ ಸಾಂಪ್ರದಾಯಿಕ ಶೈಲಿಯ ಗಣೇಶನಿಗೆ ಭಾರೀ ಡಿಮ್ಯಾಂಡ್
ಉಡುಪಿ: ಚೌತಿ ಅಂದ್ರೆ ಗಣೇಶನ ಹಬ್ಬ ಮಾತ್ರವಲ್ಲ, ಬಗೆ ಬಗೆಯ ಗಣೇಶನ ವಿಗ್ರಹಗಳೂ ಒಂದು ಪ್ರಮುಖ ಆಕರ್ಷಣೆ. ಗಣೇಶ ವಿಗ್ರಹ ತಯಾರಿಸೋ ಅವೆಷ್ಟೋ ಕಲಾವಿದರು ಇಂದಿಗೂ ಸಾಂಪ್ರದಾಯಿಕ ಶೈಲಿಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಆ ಪೈಕಿ ಮುಂಚೂಣಿಯಲ್ಲಿರುವವರು ಕಲ್ಮಾಡಿ ಶೇಖರ್ ಪೂಜಾರಿ.

Oplus_0

ಉಡುಪಿಯ ಅಲೆವೂರಿನ ಗಣೇಶ ಮೂರ್ತಿ ತಯಾರಿಸೋ ಕುಟೀರದ ದೃಶ್ಯ ಇದು…ಕಲಾಶಿಕ್ಷಕ ,ನಿವೃತ್ತ ಮುಖ್ಯೋಪಾಧ್ಯಾಯ ಕಲ್ಮಾಡಿ ಶೇಖರ್ ಪೂಜಾರಿ ಇಲ್ಲಿ ನಾಲ್ಕು ದಶಕಗಳಿಂದ ವೈವಿಧ್ಯಮಯ ಗಣೇಶನ ಮೂರ್ತಿಗಳನ್ನು ರಚಿಸುತ್ತಾ ಬಂದಿದ್ದಾರೆ.ಅವರಿಗೆ ಇದು ಬರಿ ಕಲೆಯಲ್ಲ… ಶೇಖರ್ ಪೂಜಾರಿ ಅವರ ಜೀವನವೂ ಹೌದು. ಸಾಂಪ್ರದಾಯಿಕ ಮಣ್ಣಿನ ಮೂರ್ತಿಗಳನ್ನು ರಚಿಸುವವರೇ ಕಣ್ಮರೆಯಾಗುತ್ತಿರುವ ಹೊತ್ತಿಗೆ ಇವರು ಇವತ್ತಿಗೂ ಸಾಂಪ್ರದಾಯಿಕ ಶೈಲಿಯಲ್ಲಿ ಗಣೇಶನ ಮೂರ್ತಿಗಳನ್ನು ರಚಿಸುತ್ತಾರೆ. ಉಡುಪಿ ಮಾತ್ರವಲ್ಲದೆ ಆಸುಪಾಸಿನ ಊರುಗಳಿಗೂ ಇವರು ರಚಿಸಿದ ಮೂರ್ತಿಗಳೇ ಬೇಕು.ಈಗಾಗಲೇ ತಮ್ಮ ಕಲಾಕುಟೀರದಲ್ಲಿ ಹತ್ತಾರು ಬಗೆಯ ಗಣೇಶನ ವಿಗ್ರಹಗಳನ್ನು ತಯಾರಿಸಿದ್ದಾರೆ. ಪರಿಸರಸ್ನೇಹಿ ಸಾಂಪ್ರದಾಯಿಕ ಗಣೇಶನ ಮೂರ್ತಿ ಬೇಕಿದ್ದವರಿಗೆ ಮೊದಲು ನೆನಪಾಗುವುದೇ ಕಲ್ಮಾಡಿ ಶೇಖರ್ ಪೂಜಾರಿ. ಮೂರ್ತಿ ರಚನೆಯನ್ನು ಒಂದು ಕಲಾ ಸೇವೆಯಂತೆ ಮಾಡಿಕೊಂಡು ಬಂದಿದ್ದು ಜೀವನಪೂರ್ತಿ ಕಾಯಕವನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ ಅಂತಾರೆ ಇವರು. ಮಾರುಕಟ್ಟೆಯಲ್ಲಿ ನಾನಾ ಬಗೆಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಬಣ್ಣದ ಗಣಪಗಳ ನಡುವೆಯೂ ಕಲ್ಮಾಡಿ ಶೇಖರ್ ಪೂಜಾರಿ ಅವರ ಸಾಂಪ್ರದಾಯಿಕ ಮೂರ್ತಿಗಳು ಇವತ್ತಿಗೂ ಡಿಮಾಂಡ್ ಉಳಿಸಿಕೊಂಡಿವೆ. ಒಟ್ಟಾರೆ ಹೇಳುವುದಿದ್ದರೆ ಮೂರ್ತಿ ರಚನೆ ಎಂಬುದು ಇವರಿಗೊಂದು ಧ್ಯಾನದಂತೆ. ತಮ್ಮ ಸಹಾಯಕರ ಜೊತೆ ಸೇರಿ ಕಲಾತ್ಮಕ ಮೂರ್ತಿಗಳನ್ನು ರಚಿಸುವುದರಲ್ಲೇ ಇವರು ಸಾರ್ಥಕತೆ ಮತ್ತು ಖುಷಿ ಕಾಣುತ್ತಿದ್ದಾರೆ.

ಬೈಟ್: ಕಲ್ಮಾಡಿ ಶೇಖರ್ ಪೂಜಾರಿ ,ಕಲಾವಿದ