ತಮಿಳುನಾಡು: ಫೆಂಗಲ್‌ ಚಂಡಮಾರುತದ ಪರಿಣಾಮದಿಂದ ಚೆನ್ನೈ ವಿಮಾನ ನಿಲ್ದಾಣ ಬಂದ್‌; ರೆಡ್‌ ಅಲರ್ಟ್ ಘೋಷಣೆ

ಚೆನ್ನೈ: ಫೆಂಗಲ್‌ ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ಭಾರೀ ಮಳೆಯಾಗಿದ್ದು, ಜನರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಶನಿವಾರ (ನ.30) ಮುನ್ಸೂಚನೆ ನೀಡಿದ್ದು, ಫೆಂಗಲ್‌ ಚಂಡಮಾರುತ ಕಾರೈಕಲ್‌ ಮತ್ತು ಮಹಾಬಲಿಪುರಂ ನಡುವೆ ಅಪ್ಪಳಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯ ಕಾರೈಕಲ್‌ ಮತ್ತು ಮಹಾಬಲಿಪುರಂ ನಡುವೆ ಫೆಂಗಲ್‌ ಚಂಡಮಾರುತ ಹಾದು ಹೋಗಲಿದ್ದು, ಗಂಟೆಗೆ 70-80 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.

ಚಂಡಮಾರುತದಿಂದಾಗಿ ಹವಾಮಾನ ಬದಲಾವಣೆಯಾಗಲಿದ್ದು, ವಿಮಾನ ಮತ್ತು ಸ್ಥಳೀಯ ರೈಲು ಓಡಾಟದ ಮೇಲೆ ಪರಿಣಾಮ ಬೀರಿರುವುದಾಗಿ ವರದಿ ತಿಳಿಸಿದೆ. ಇಂದು ರಾತ್ರಿ 7ಗಂಟೆವರೆಗೆ ಚೆನ್ನೈ ವಿಮಾನ ನಿಲ್ದಾಣ ಮುಚ್ಚಲಿದ್ದು, ಸ್ಥಳೀಯ ರೈಲು ಸಂಚಾರ ಸ್ಥಗಿತಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನಲ್ಲಿ ಭಾರೀ ಮಳೆಯಿಂದಾಗಿ ಎಟಿಎಂಗೆ ತೆರಳಿದ್ದ ವ್ಯಕ್ತಿಯೊಬ್ಬನಿಗೆ ವಿದ್ಯುತ್‌ ಶಾಕ್‌ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚೆನ್ನೈ, ತಿರುವಳ್ಳೂರ್‌, ಕಾಂಚೀಪುರಂ, ಕಲ್ಲಕುರಿಚಿ ಹಾಗೂ ಕಡಲೂರು, ಪಾಂಡಿಚೇರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡಿನಾದ್ಯಂತ ರೆಡ್‌ ಅಲರ್ಟ್‌ ಘೋಷಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ. ಆಯ್ದ ಜಿಲ್ಲೆಗಳಲ್ಲಿ ಬೋಟ್ಸ್‌, ಜನರೇಟರ್ಸ್‌, ಮೋಟಾರ್‌ ಪಂಪ್‌ ಗಳು ಹಾಗೂ ಮರ ಕತ್ತರಿಸುವ ಕಟ್ಟರ್ಸ್‌ ಗಳನ್ನು ಸಿದ್ದಮಾಡಿ ಇಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.