ಉಡುಪಿ: ಬೆಂಗಳೂರಿನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜೀನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ ಯನ್ನು ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಲೇಖಕರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಸುರ್ವೆ, ಗೌರವಾಧ್ಯಕ್ಷ ರಮೇಶ್ ಎನ್.ಅಂಗಡಿ, ಬೆಳಗಾವಿ ಚಿಪ್ಪಲಕಟ್ಟಿ ಹಿರೇಮಠದ ಡಾ.ಕಲ್ಮೇಶ್ವರ ಸ್ವಾಮಿ, ಬೆಂಗಳೂರು ವನಕಲ್ಲು ಶ್ರೀ ಮಲ್ಲೇಶ್ವರ ಸುಕ್ಷೇತ್ರದ ಡಾ.ಬಸವರಮಾನಂದ ಮಹಾಸ್ವಾಮಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ, ನಟಿ ಮೀನಾ, ನಟ ಶಂಕರ ಭಟ್, ಸಾಹಿತಿ ಡಾ,ಮಹಂತೇಶ ಮಲ್ಲನಗೌಡರ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಸ್ತುತ ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ, ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೆ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸುತ್ತಿದ್ದಾರೆ.
ಇವರ ಕಲಾಸಂಚಯ-ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ' ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನ ಲಭಿಸಿದೆ. ಅಲ್ಲದೆ ಇದೇ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ 2020ನೇ ಸಾಲಿನ
ಪುಸ್ತಕ ಸೊಗಸು ‘ ಗೌರವ ಪ್ರದಾನವಾಗಿದೆ. ಇವರು ಸಲ್ಲಿಸಿದ ಅನುಪಮ ಕೊಡುಗೆಗಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರದ ಡಾಕ್ಟರೇಟ್ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಘಸಂಸ್ಥೆಗಳಿಂದ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.