ದೀಪಾವಳಿ ಹಬ್ಬ ಆಚರಣೆಯ ಬಗ್ಗೆ ಪ್ರಿಯದರ್ಶಿನಿ ಅವರು ಬರೆದ ವಿಶೇಷ ಬರಹ..ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬಗಳೆಂದರೆ ಮೈ ಮನ ಸ್ವಚ್ಚಗೊಳಿಸುವುದು ಮತ್ತು ದಿನನಿತ್ಯವಲ್ಲದ ಹೊಸದೊಂದು ದಿನದ ಆಚರಣೆ. ಈ ಹಬ್ಬಗಳೇ ಬದುಕಿಗೆ ವಿಶೇಷ ಕಾರಣ, ನಮ್ಮ ದೈನಂದಿನ ಬದುಕಿಗೆ ಒಂದಷ್ಟು ವಿಶೇಷ ಆಚರಣೆಗಳ ಮೂಲಕ ಕಳೆ ತುಂಬುವ ಸಂಭ್ರಮ ವಿದು. ಹಾಗಾಗಿ ನಮ್ಮ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಮನ್ನಣೆಯಿದೆ.
ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.ಜನಪ್ರಿಯ ದಂತಕಥೆಯ ಪ್ರಕಾರ ಈ ಹಬ್ಬವು ಕಾರ್ತಿಕ ಅಮವಾಸ್ಯೆಯಂದು ಯಮ ಮತ್ತು ನಚಿಕೇತನ ಕಥೆಯೊಂದಿಗೆ ಸಂಬಂಧಿಸಿದೆ. ನಿಜವಾದ ಸಂಪತ್ತೆಂದರೆ ಜ್ಞಾನ, ಸರಿ ಮತ್ತು ತಪ್ಪುಗಳ ಕಥೆಯನ್ನು ವಿವರಿಸುವ ಕಥೆಯು ಬಹುಶಃ ದೀಪಾವಳಿಯನ್ನು ಸಮೃದ್ಧಿ, ಬುದ್ಧಿವಂತಿಕೆ ಮತ್ತು ಬೆಳಕಿನ ಹಬ್ಬವಾಗಿ ಆಚರಿಸಲು ಕಾರಣವಾಗಿದೆ.
ದೀಪಾವಳಿಯ ಐದು ದಿನಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ಪದನಾಮವನ್ನು ಹೊಂದಿದೆ, ಅಲ್ಲಿ ಮೊದಲ ದಿನ – ನರಕ ಚತುರ್ದಶಿಯು ಶ್ರೀಕೃಷ್ಣ ಮತ್ತು ಅವನ ಪತ್ನಿ ಸತ್ಯಭಾಮೆಯ ಕೈಯಲ್ಲಿ ನರಕನ ಸೋಲನ್ನು ಸೂಚಿಸುತ್ತದೆ.
ಎರಡನೇ ದಿನ ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪಿಗಾಗಿ ನರಕ ಚತುರ್ದಶಿಯನ್ನು ಆಚರಿಸುತ್ತಾರೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ.
ಮೂರನೇ ದಿನ ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿ ದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.ದೀಪಾವಳಿಯ ನಾಲ್ಕನೇ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಬಾಯ್ ದೂಜ್ ಅನ್ನು ಬಯ್ಯಾ ದೂಜ್ ಎಂದು ಕರೆಯುತ್ತಾರೆ.
ದೀಪಾವಳಿಯ ಐದನೇ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಹಬ್ಬವಾಗಿದ್ದು, ಅಣ್ಣಂದಿರು ತಮ್ಮ ತಂಗಿಯ ಮನೆಗೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ತಿಲಕ ಶಾಸ್ತ್ರ ಮಾಡುತ್ತಾರೆ.ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಭಾರತದ ಮೇಲೆ ಆಕ್ರಮಣಕಾರರು ದಾಳಿ ಮಾಡಿದ ಮೇಲೆ ಭೂಭಾಗ ತುಂಡು ತುಂಡಾಗಿ ಹೋಯಿತು. ಮೊದಲು ಆಫ್ಘಾನಿಸ್ತಾನದಿಂದ ಬರ್ಮಾವರೆಗೆ, ಶ್ರೀಲಂಕಾ, ಕಾಂಬೋಡಿಯಾ,ವಿಯೆಟ್ನಾಂ ಅವೆಲ್ಲವೂ ಕೂಡ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಅಲ್ಲೆಲ್ಲ ಕೂಡ ದೀಪಾವಳಿಯ ಕಾರ್ತಿಕೋತ್ಸವವನ್ನು ಬೇರೆ ಬೇರೆ ತರದಲ್ಲಿ ಆಚರಣೆ ಮಾಡುತ್ತಾರೆ.
ದೀಪಾವಳಿಯ ಸಿದ್ಧತೆಗಳು ಭಾರತೀಯರಿಗೆ ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿವೆ. ಹಬ್ಬಕ್ಕೆ ಒಂದು ವಾರದ ಮೊದಲು ಸಿದ್ಧತೆಗಳು ಪ್ರಾರಂಭವಾಗುತ್ತವೆ ಮತ್ತು ಜನರು ಹೊಸ ಬಟ್ಟೆ, ಉಡುಗೊರೆಗಳು, ಪುಸ್ತಕಗಳು, ದೀಪಗಳು, ಪಟಾಕಿಗಳು, ಸಿಹಿತಿಂಡಿಗಳು, ಒಣ ಹಣ್ಣುಗಳು ಇತ್ಯಾದಿಗಳನ್ನು ಖರೀದಿಸಲು ತೊಡಗುತ್ತಾರೆ. ಕೆಲವರು ಹಳೆಯ ವಸ್ತುಗಳನ್ನು ತ್ಯಜಿಸಿ ಹೊಸದನ್ನು ಖರೀದಿಸುತ್ತಾರೆ ಎಂದು ನಂಬುತ್ತಾರೆ. ಇದು ಮನೆಯಲ್ಲಿ ಬಳಸದ ಹಳೆಯ ವಸ್ತುಗಳನ್ನು ತ್ಯಜಿಸುವುದು ಮತ್ತು ದೀಪಾವಳಿಯಂದು ಹೊಸದನ್ನು ಖರೀದಿಸುವುದನ್ನು ಒಳಗೊಂಡಿರುತ್ತದೆ, ಆದ್ದರಿಂದ ಹಬ್ಬವು ಹೊಸತನ ತರುತ್ತದೆ.
ದೀಪಾವಳಿ ಎಂದರೆ ಎಲ್ಲರೂ ಸಂತೋಷದಿಂದ ಆಚರಿಸುವ ಹಬ್ಬ. ಹೆಚ್ಚು ಪಟಾಕಿಗಳನ್ನು ಸಿಡಿಸುವುದು ಇನ್ನೊಂದು ರೀತಿಯ ಸಂಭ್ರಮ.. ಈ ನಡುವೆಯೂ ಪಟಾಕಿ ಯೂ ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಎಲ್ಲರು ಕೈಜೋಡಿಸಿ ಈ ಸಾಂಪ್ರದಾಯಿಕ ಹಬ್ಬವನ್ನು ಜವಾಬ್ದಾರಿಯಿಂದ ಆಚರಿಸುವುದು ಕೂಡ ತುಂಬಾ ಮುಖ್ಯ.ಇತಿಹಾಸದ ಪುಟದಲ್ಲಿ ದಾಖಲಾದ ಸಂಭ್ರಮಕ್ಕೆ ಪ್ರತಿ ವರ್ಷ ಭೇಟಿ ನೀಡಿ ಸಂತೋಸಸುವುದು ರೂಢಿ.. ಹಾಗೆಯೇ ಈ ವರ್ಷದ ಸಂಭ್ರಮಕ್ಕೆ ಬೆಳಕಿನ ಹಣತೆ ಮಾತ್ರ ವಲ್ಲ, ಕತ್ತಲ ಬದುಕಿಗೆ ಬೆಳಕು ನೀಡುತ್ತಾ ಸಂಭ್ರಮಮಿಸೋಣ…