ಜುಲೈ 30ರಂದು ಎಮ್ 11 ಇಂಡಸ್ಟ್ರಿ ಬಯೋ ಡೀಸೆಲ್ ಹಾಗೂ ಫಾಮ್ ಆಯಿಲ್ ಘಟಕದ ವಿರುದ್ಧ ಪ್ರತಿಭಟನೆ

ಉಡುಪಿ: ಕಾಪು ತಾಲೂಕಿನ ಫಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ಗ್ರಾಮದ ದೇವರ ಕಾಡು ಪ್ರದೇಶದಲ್ಲಿ ಮೂರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ‘ಎಮ್ 11 ಇಂಡಸ್ಟ್ರಿ ಬಯೋ ಡೀಸೆಲ್ ಹಾಗೂ ಫಾಮ್ ಆಯಿಲ್ ಘಟಕ’ ದಿಂದ ವಿಷ ಅನಿಲ ಹಾಗೂ ಕೆಮಿಕಲ್ ಮಿಶ್ರಿತ ಆಯಿಲ್ ಹೊರ ಬಿಡಲಾಗುತ್ತಿದೆ‌‌. ಇದರಿಂದ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಭಾಗದ ಜನರು ಜೀವನ‌ ಸಾಗಿಸುವುದೇ ಕಷ್ಟಕರವಾಗಿದೆ. ಆದ್ದರಿಂದ ಎಮ್ 11 ಕಂಪೆನಿಯ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜುಲೈ 30ರಂದು ಕಂಪೆನಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕೋಟ್ಯಾನ್ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಎಮ್ 11 ಘಟಕವು ನಂದಿಕೂರು, ಪಲಿಮಾರು, ನಡ್ಡಾಲು, ಪಾದೆಬೆಟ್ಟು, ಎಲ್ಲೂರು, ಹೆಜಮಾಡಿ, ಇನ್ನಾ ಹಾಗೂ ಕರ್ನಿರೆ ಗ್ರಾಮದ ವ್ಯಾಪ್ತಿಯಲ್ಲಿ ವಿಷ ಅನಿಲ ಹರಡುತ್ತಿದೆ. ಅಲ್ಲದೆ, ಕೆಮಿಕಲ್ ಮಿಶ್ರಿತ ಆಯಿಲ್ ಮಳೆ ನೀರು ಹರಿಯುವ ತೋಡಿನಲ್ಲಿ ಹರಿದು ಶಾಂಭವಿ ನದಿಯ ಒಡಲು ಸೇರುತ್ತಿದೆ. ಕೊಳವೆ ಬಾವಿ ಹಾಗೂ ಬಾವಿಯ ನೀರು ಕಲುಷಿತಗೊಂಡಿದೆ. ಸ್ಥಳೀಯ ಅಂಗನವಾಡಿ ಹಾಗೂ ಶಾಲೆಯ ಮಕ್ಕಳಿಗೆ ತಲೆ ಸುತ್ತು ಬರುವಿಕೆ ಹಾಗೂ ವಾಂತಿ ಭೇದಿ ಅಂತಹ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಹಾಗೂ ಟವಲ್ ಸುತ್ತಿಕೊಂಡು ಮನೆಯ ಒಳಗೆ ಹೊರಗೆ ಓಡಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.

ಪರಿಸರ ಇಲಾಖೆಯ ಅಧಿಕಾರಿಗಳು ಜೂನ್ 26ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೋಕಾಸ್ ನೋಟಿಸ್ ನೀಡಿದ್ದಾರೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಆ ನಂತರ ಪರಿಸರ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಜುಲೈ 3ರಂದು ಭೇಟಿ ನೀಡಿ, ಕಂಪನಿ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ್ದಾರೆ‌. ಅಲ್ಲದೆ, ವಿದ್ಯುತ್ ಕಡಿತಗೊಳಿಸುವ ಎಚ್ಚರಿಕೆ ನೀಡಿದರೂ ಯಾವುದನ್ನು ಲೆಕ್ಕಿಸದೆ ಕಂಪನಿಯು ಪರಿಸರ ವಿರೋಧಿಯಾಗಿ ಜನರಿಗೆ ನಿರಂತರ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಗ್ರಾಪಂ ಸದಸ್ಯರಾದ ಲಕ್ಷ್ಮಣ್ ಶೆಟ್ಟಿ, ನಾಗೇಶ್ ರಾವ್ ಉಪಸ್ಥಿತರಿದ್ದರು.