ಜಿಲ್ಲೆಯ ಪ್ರವಾಸಿ ತಾಣಗಳನ್ನು ಜನಾಕರ್ಷಣೀಯ ಗೊಳಿಸಿ: ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯ ಸುಂದರ ನಿಸರ್ಗ ಸೌಂದರ್ಯ, ಕಡಲ ತೀರ, ಧಾರ್ಮಿಕ ಕೇಂದ್ರಗಳು, ಸ್ಥಳೀಯ ಸಂಸ್ಕೃತಿ, ಸಾಂಪ್ರದಾಯ, ಜಾನಪದ ಕಲೆ, ಧಾರ್ಮಿಕ ಉತ್ಸವಗಳೂ ಸೇರಿದಂತೆ ಮತ್ತಿತರ ಬಗ್ಗೆ ದೇಶ-ವಿದೇಶದ ಜನರಿಗೆ ಪ್ರಚಾರಪಡಿಸುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉಡುಪಿ ಹಾಗೂ ಜಸ್ಟ್ ರೋಲ್ ಫಿಲ್ಮ್ಸ್ ಅವರ ಸಹಯೋಗದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳನ್ನೊಳಗೊಂಡ, ಸುಮಧುರ ಹಾಡಿನೊಂದಿಗೆ ರಚಿಸಿರುವ “ಉಡುಪಿ ಆಂಥೆಮ್” ಎಂಬ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ವಿಡಿಯೋ ಚಿತ್ರಣವನ್ನು ಬಿಡುಗಡೆಗೊಳಿಸಿ, ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಸ್ವಾಭಾವಿಕ ಪ್ರಕೃತಿ ಸೌಂದರ್ಯ, ಬೋರ್ಗರೆಯುವ ಕಡಲಕಿನಾರೆಗಳು, ಹಳ್ಳ ಕೊಳ್ಳ, ತೊರೆ ನದಿಗಳು, ಪಶ್ಚಿಮ ಘಟ್ಟದ ಶ್ರೇಣಿಗಳು ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳು ಒಳಗೊಂಡಂತೆ 48 ಪ್ರವಾಸಿ ತಾಣಗಳ ಜೊತೆಗೆ 32 ಪ್ರವಾಸಿ ತಾಣಗಳನ್ನು ಹೊಸದಾಗಿ ಗುರುತಿಸುವುದರೊಂದಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಧುನಿಕ ತಂತ್ರಜ್ಞಾನಗಳ ಬಳಕೆಯೊಂದಿಗೆ ಹೆಚ್ಚು ಜನರನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.ಈ ದಿನ ಬಿಡುಗಡೆಗೊಳ್ಳಲಿರುವ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜಸ್ಟ್ ರೋಲ್ ಫಿಲ್ಮ್ಸ್ ರವರು ರೂಪಿಸಿರುವ “ಉಡುಪಿ ಆಂಥೆಮ್” ವಿಡಿಯೋ ಚಿತ್ರಣವು ಸುಮಧುರ ಭಾವದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಿಸುವ ಚಿತ್ರಣವು ಉತ್ತಮವಾಗಿ ಮೂಡಿಬಂದಿದೆ. ಇದನ್ನು ಜಿಲ್ಲೆಯ ವೆಬ್‌ಸೈಟ್, ಇನ್ಸ್ಟಗ್ರಾಮ್, ಟ್ವಿಟರ್ ಹಾಗೂ ಪ್ರತಿಷ್ಠಿತ ಬ್ಲಾಗ್‌ಗಳ ಮೂಲಕ ಸೇರಿದಂತೆ ಮತ್ತಿತರ ಜಾಲಗಳಲ್ಲಿ ಹೆಚ್ಚು ಪ್ರಚಾರಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು, ವಾರ್ತಾಧಿಕಾರಿ ಮಂಜುನಾಥ್, ಜಸ್ಟ್ ರೋಲ್ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನ ನಿರ್ದೇಶಕ, ನಿರ್ಮಾಪಕರು ಹಾಗೂ ಸಾಹಿತ್ಯ ಸಂಯೋಜಕರು ಉಪಸ್ಥಿತರಿದ್ದರು.
5 ನಿಮಿಷಗಳ ವಿಡಿಯೋ ಚಿತ್ರಣದಲ್ಲಿ “ಅಂದದ ಚೆಂದದ ನೂತನ ಚೇತನ ಸುಂದರ ಸೊಗಸಿನ ಊರು, ರಮ್ಯ ನಿಸರ್ಗದ ತೋರಣ ಹೊತ್ತ ನಯನ ಮನೋಹರ ಬೀಡು, ಅರಬ್ಬಿ ಸಮುದ್ರದ ಅಲೆಗಳು ಬಾಗುವ ಕಡಲ ಕಿನಾರೆಯ ನಾಡು, ಪ್ರೀತಿ-ಅಕ್ಕರೆ ತುಂಬಿದ ನಿತ್ಯ ರಮಣೀಯ ಗೂಡು, ಉಡುಪಿ……..” ಹಾಡಿನಲ್ಲಿ ದೇವಾಲಯಗಳು, ಭಾಷೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳು, ಹಬ್ಬ ಜಾತ್ರೆಗಳ ವೈಭವ, ಯಕ್ಷಗಾನ, ಭೂತ ನೇಮ, ಕೋಲ ಆಚರಣೆ, ಕಂಬಳದ ವೈಭವ ಅದ್ಭುತವಾಗಿ ಮೂಡಿಬಂದಿದೆ.