ಚನ್ನಪಟ್ಟಣದಲ್ಲಿ ನೂರಕ್ಕೆ ನೂರು ಡಿ.ಕೆ. ಶಿವಕುಮಾರ್ ಸ್ಪರ್ಧಿಸಲ್ಲ

ಉಡುಪಿ: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಎಲ್ಲಾ ಕಡೆನೂ ಡಿಕೆ ಶಿವಕುಮಾರ್ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ನೂರಕ್ಕೆ ನೂರು ಡಿ.ಕೆ. ಶಿವಕುಮಾರ್ ಸ್ಪರ್ಧಿಸಲ್ಲ. ಬೇರೆ ಅಭ್ಯರ್ಥಿ ನಿಲ್ತಾರೆ, ಅದು ಕಾಂಗ್ರೆಸ್ ಪಕ್ಷದ ನಿರ್ಧಾರ. ಚುನಾವಣೆಗೊಂದು ಸ್ಟಂಟ್ ಬೇಕಲ್ಲ ಅದಕ್ಕೆ ಆ ರೀತಿ ಹೇಳ್ತಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ನಾನೇ ಅಭ್ಯರ್ಥಿ ಎಂದು ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ. ಅದು ಎರಡು ಸುಳ್ಳು, ನಿಜವಾದ ಅಭ್ಯರ್ಥಿ ಬೇರೆ ಹಾಕ್ತಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿ ಎನ್ ಡಿ ಎ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಬಂಡಾಯ ವಿಚಾರದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಬಳಿ ಯೋಗೇಶ್ವರ್ ಬಗ್ಗೆ ಚರ್ಚೆ ಮಾಡುತ್ತೇವೆ. ಕುಮಾರಸ್ವಾಮಿ ಹಾಗೂ ದೆಹಲಿಯ ವರಿಷ್ಠರ ಹತ್ರ ಯೋಗೀಶ್ವರ ಅಭ್ಯರ್ಥಿ ಆದರೆ ಒಳ್ಳೆಯದು ಎಂದಿದ್ದೇವೆ. ಆದರೆ ಅದಕ್ಕೆ ಕುಮಾರಸ್ವಾಮಿ ಅವರು ಒಪ್ಪಬೇಕು. ಹೀಗಾಗಿ ಅವರ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಈ ವಿಚಾರದಲ್ಲಿ ಕುಮಾರಸ್ವಾಮಿಗೆ ಹೆಚ್ಚು ಅಧಿಕಾರ ಇದೆ.

ಕೊನೆಯದಾಗಿ ಅವರು ಹೇಳಿದ ತೀರ್ಮಾನದಂತೆ ಮಾಡುತ್ತೇವೆ. ನಾನು ಯೋಗೇಶ್ವರ್ ಜೊತೆ ಮಾತನಾಡುತ್ತೇನೆ. ಸರ್ವಸಮ್ಮತ ಅಭ್ಯರ್ಥಿಯಾಗುವ ರೀತಿ ಕೆಲಸ ಮಾಡುತ್ತವೆ ಎಂದರು.

ಯಾವುದೇ ಕಾರಣಕ್ಕೂ ಮೂಡ ಹಗರಣ ವಾಲ್ಮೀಕಿ ಹಗರಣ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿಯ ಹೋರಾಟದಿಂದ ಇವತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬಂದಿದೆ. ನಮ್ಮ ಹೋರಾಟದಿಂದಲೇ ಈಡಿ ಲೋಕಾಯುಕ್ತ ತನಿಖೆಗಳು ಆಗುತ್ತಿವೆ ಎಂದು ಹೇಳಿದರು.

ಖರ್ಗೆ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ. ಖರ್ಗೆಗೆ ಸಿಎಂ ಆಗಲು ಬಹಳ ದಿನದಿಂದ ಆಸೆ. 30, 40 ವರ್ಷದಿಂದ ಟ್ರೈ ಮಾಡಿದರೂ ಆಗಲಿಲ್ಲ. ಈಗ ಬಂದು ಅವಕಾಶ ಬಂದಿದೆ. ಸೈಟ್ ಕಂಟಕ ಇದ್ರೆ ಹೋಗ್ಲಿ ಅಂತ ವಾಪಸ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.