ಗೋವಿನ ಕೆಚ್ಚಲು ಕತ್ತರಿಸಿರುವುದು ಭವಿಷ್ಯದ ಅಪಾಯವನ್ನು ಸೂಚಿಸುತ್ತದೆ: ಪುತ್ತಿಗೆ ಶ್ರೀ

ಉಡುಪಿ: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ ಅಮಾನವೀಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಯ ಬಗ್ಗೆ ಕೇಳಿ ಆಘಾತವಾಗಿದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ‌ ಶ್ರೀಪಾದರು ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಕುರಿತು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಗೋವುಗಳೆಂದರೆ ದೇವರ ಸನ್ನಿಧಾನ ಇರುವ ಸ್ಥಳ ಎಂದು ನಾವು ಗೌರವಿಸುತ್ತೇವೆ. ಪವಿತ್ರ ಎಂದು ಪರಿಗಣಿಸಿ ಭಾರತದಲ್ಲಿ ಪೂಜಿಸಲಾಗುತ್ತದೆ. ಆದರೆ, ಚಾಮರಾಜಪೇಟೆಯಲ್ಲಿ ಕ್ರೂರವಾಗಿ ಹಿಂಸೆಯನ್ನು ನೀಡಿ ಹಸುವಿಗೆ ಘಾಸಿಗೊಳಿಸಲಾಗಿದೆ. ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಭಯಾನಕತೆಯನ್ನು ಸೂಚಿಸುತ್ತದೆ ಎಂದರು.

ಯಾವುದೇ ಘಟನೆಯನ್ನು ಗೋವಿನ ಮೇಲೆ ಹಿಂಸೆಯಾಗಿ ಪರಿಗಣಿಸಬಾರದು. ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ. ನಮ್ಮ ದೇಶದಲ್ಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದರೆ ಮುಂದೆ ಏನಾಗಬಹುದು? ಅದನ್ನು ಯೋಚಿಸಿದರೆ ಕತ್ತಲೆ ಕವಿದಂತಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.

ಈ ಘಟನೆ ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ. ಗೋಪಾಲಕೃಷ್ಣನ ಸನ್ನಿಧಾನದಿಂದ ನಾನು ಈ ಕೃತ್ಯವನ್ನು ಖಂಡಿಸುತ್ತೇನೆ. ಸರ್ಕಾರ ವಿಶೇಷ ಪ್ರಯತ್ನವಹಿಸಿ ಅಪರಾಧಿಗಳನ್ನು ಶಿಕ್ಷಿಸಬೇಕು‌ ಎಂದು ಒತ್ತಾಯಿಸಿದ್ದಾರೆ.