ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮವನ್ನು ಶಿಕ್ಷಕರ ದಿನಾಚರಣೆಯಂದು ಹಮ್ಮಿಕೊಳ್ಳಲಾಯಿತು. ಜ್ಞಾನಜ್ಯೋತಿಯನ್ನು ಬೆಳಗಿ, ಡಾ.ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ, ನಲ್ಲೂರಿನ ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಪೂರ್ಣಿಮಾ ರಮೇಶ್ ಶೆಣೈರವರು ಮಾತನಾಡಿ ‘ ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರು’ ಎಂದರು. ಕಾರ್ಕಳದ ಬೈಲೂರು ಹೊಸ ಬೆಳಕು ಸಂಸ್ಥೆಯ ವ್ಯವಸ್ಥಾಪಕರಾದ ತನುಲಾ ತರುಣ್ ರವರು ಮಾತನಾಡಿ ‘ ಗುರುವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರದಾರನೇ ಶಿಕ್ಷಕ ‘ ಎಂದು ನುಡಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ‘ ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಜವಾಬ್ದಾರಿಯ ಬಗ್ಗೆ ಕಲಿಸಿಕೊಡುತ್ತಾರೆ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಬಾಳು ಎಂದಿಗೂ ಹಸನಾಗಿರಲಿ’ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಂಗ್ಲ ಭಾಷಾ ಮುಖ್ಯಸ್ಥ ರಾಜೇಶ್ ಶೆಟ್ಟಿ, ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ರವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

Oplus_0

2023 ನೇ ಸಾಲಿನ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳಾದ ಅಭಯ ಎಸ್ ಎಸ್ ಹಾಗೂ ಕಾರ್ತಿಕ್ ಹೆಗ್ಡೆ ರವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಅಭಯ್ ರವರಿಗೆ ಪ್ರಶಸ್ತಿಯ ಜೊತೆಗೆ 25,000 ನಗದನ್ನು ಹಸ್ತಾಂತರಿಸಲಾಯಿತು. ಹೊಸಬೆಳಕು ಸಂಸ್ಥೆಗೆ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ 5000 ರೂ. ಮೌಲ್ಯದ ಪುಸ್ತಕಗಳನ್ನು ಒದಗಿಸಲಾಯಿತು.

ಸಹ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಶಿವಕುಮಾರ್, ವೃಂದಾ ದಾತೆ, ಗಿರೀಶ್ ಭಟ್, ಶ್ರೀನಿಧಿ ಎಸ್ ನಾಯಕ್ ರವರು ಸನ್ಮಾನ ಪತ್ರ ಹಾಗೂ ಉಪನ್ಯಾಸಕರ ಯಾದಿಗಳನ್ನು ವಾಚಿಸಿದರು. ಎಲ್ಲಾ ಉಪನ್ಯಾಸಕ ವರ್ಗದವರಿಗೆ ಸಂಸ್ಥೆಯ ವತಿಯಿಂದ ಗೌರವ ಕಾಣಿಕೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥಾಪಕರು, ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ರವರು ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ರವರು ವಂದಿಸಿದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರೂಪಿಸಿದರು.