ಕೋಟೇಶ್ವರ: ಕಾರು ಢಿಕ್ಕಿ ಹೊಡೆದು ಚಾಲಕನೋರ್ವ ಮೃತ್ಯು

ಕುಂದಾಪುರ: ಕಾರು ಢಿಕ್ಕಿ ಹೊಡೆದ ಪರಿಣಾಮ ಚಾಲಕನೋರ್ವ ಮೃತಪಟ್ಟ ಘಟನೆ ಕೋಟೇಶ್ವರದ ಅಂಕದಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತ ಲಾರಿ ಚಾಲಕನನ್ನು ಲಾಡಸಾಬ್ ನದಾಫ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯ ಟಯರ್ ಪಂಚರ್ ಆಗಿದ್ದು, ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ ಚಾಲಕ ನದಾಪ್ ಟಯರ್ ಚೆಕ್ ಮಾಡುತ್ತಿದ್ದರು.

ಈ ವೇಳೆ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗದಿಂದ ಬಂದ ಕಾರು ನದಾಫ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನದಾಫ್ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.