ಉಡುಪಿ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಶನಿವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀದೇವಿಯ ವಿಜೃಂಭಣೆಯ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ದೇಗುಲದ ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 12.30 ರ ವೇಳೆಗೆ ಜೋಡಿ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಯಲ್ಲಿ ಕೊಂಡೊಯ್ಯಲಾಯಿತು.
ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯ ಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು. ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ವಾರ್ಷಿಕ ಜಾತ್ರೆಯ ತೇರಿನ ವೈಭವಕ್ಕೆ ದೇಶ-ವಿದೇಶದಿಂದ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ಸಂಜೆ ನಡೆದ ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣು ಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.












