ಕೊರಗ ಸಮುದಾಯ ಹಾಡಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಕೊರಗ ಸಮುದಾಯದ ಹಾಡಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇವೆ, ಸಂಪರ್ಕ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಮಂಗಳವಾರ ಮಣಿಪಾಲ ರಜತಾದ್ರಿಯ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ-ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ ಅನುಷ್ಠಾನ ಕುರಿತ ಅಂತರ್ ಇಲಾಖೆಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು.

ಸರ್ಕಾರ ಆದಿವಾಸಿ ಹಾಗೂ ಬುಡಕಟ್ಟುಗಳ ಜನಾಂಗದವರ ಸಮಗ್ರ ಅಭಿವೃದ್ಧಿ ಸೇರಿದಂತೆ ಅವರುಗಳ ಕಲ್ಯಾಣ ಅಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಕೊರಗ ಸಮುದಾಯದವರು ಹೆಚ್ಚಿನ ಜನರು ಅನಕ್ಷರಸ್ಥರೇ ಇರುವ ಹಿನ್ನಲೆಯಲ್ಲಿ ಅವರುಗಳಿಗೆ ಯೋಜನೆಗಳ ಅರಿವು ಮೂಡಿಸಿ ಫಲಾನುಭವಿಗಳಾಗಿಸುವ ಕೆಲಸ ಆಗಬೇಕು ಎಂದರು. ಸರ್ಕಾರವು ವಿಶೇಷ ದುರ್ಬಲ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಆರೋಗ್ಯ ಸೇವೆಯನ್ನು ಪ್ರಧಾನ ಮಂತ್ರಿ-ಜನ್ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ ಅಡಿಯಲ್ಲಿ ಅಂತರ್ ಇಲಾಖಾಸಮನ್ವಯದೊಂದಿಗೆ ಸೇವೆಗಳನ್ನು ಒದಗಿಸಬೇಕು ಎಂದರು.

ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಡಿಯಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿಗೆ ಪ್ರಾಥಮಿಕ ಆರೋಗ್ಯ ಸೇವೆಗಳಾದ ಸಿಕಲ್ ಸೆಲ್ ಅಭಿಯಾನ, ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಸುರಕ್ಷಿತ್ ಮತ್ರಿತ್ವ ಅಭಿಯಾನ ಕಾರ್ಯಕ್ರಮ ಮತ್ತು ಎಬಿಆರ್‌ಕೆ ಕಾರ್ಡ್ವಿತರಣೆ ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳನ್ನು ಒದಗಿಸುವಂತೆ ತಿಳಿಸಿದರು.

ಸಭೆಯಲ್ಲಿ, ಸಮಾಜಕಲ್ಯಾಣ ಇಲಾಖಾಧಿಕಾರಿ ಅನಿತಾ ಮಡ್ಲೂರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುಮಂಗ, ಜಿಲ್ಲಾ ಯೋಜನ ಸಮನ್ವಯಾಧಿಕಾರಿ ದೂದ್‌ಪೀರ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಕೆ.ಎಂ.ಸಿ ಮಣಿಪಾಲ ಕಮ್ಯುನಿಟಿ ಹೆಲ್ತ್ ವಿಭಾಗದ ಮುಖ್ಯಸ್ಥ, ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥ ಪ್ರಸನ್ನ, ಜಿಲ್ಲಾ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಉಪಸ್ಥಿತರಿದ್ದರು.