ಕೊರಗ ಯುವಜನತೆಗೆ ಉದ್ಯೋಗ, ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

Oplus_0

ಮಳೆಯ ಮಧ್ಯೆಯೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗ ಸಮುದಾಯದ ಮಕ್ಕಳು, ಮಹಿಳೆಯರು, ವೃದ್ಧರು ಧರಣಿ ನಡೆಸುತ್ತಿದ್ದು, ಅಲ್ಲೇ ಮಧ್ಯಾಹ್ನ, ರಾತ್ರಿಯ ಅಡುಗೆಯನ್ನು ತಯಾರಿಸಿ, ಊಟ ಮಾಡಿ ಧರಣಿಯನ್ನು ಮುಂದುವರೆಸಿದ್ದಾರೆ. ಸುಮಾರು 25 ಮಂದಿ ರಾತ್ರಿ ವೇಳೆ ಧರಣಿ ಸ್ಥಳದಲ್ಲಿ ಉಳಿದುಕೊಂಡು ತಮ್ಮ ಹೋರಾಟ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸುವವರೆಗೆ ಹೋರಾಟ ಮುಂದುವರೆಸಲಾಗುವುದು. ನಮ್ಮಗೆ ನಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಮುಖ್ಯಮಂತ್ರಿ ಜೊತೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದ್ದಾರೆ.

Oplus_0

ಶಿಕ್ಷಣ ಪಡೆದ ಯುವಜನತೆಗೆ ಉದ್ಯೋಗವನ್ನು ಒದಗಿಸಿಕೊಡಲು ಸರಕಾರ ಹಾಗೂ ಜಿಲ್ಲಾಡಳಿತ ಆಶ್ವಾಸನೆ ನೀಡಿ ವಂಚಿಸಿದೆ. ಕೊರಗ ಸಮುದಾಯದ ಯುವಜನತೆಗೆ ಶೇ.100 ಉದ್ಯೋಗ ಭದ್ರತೆಗೆ ಸಂಬಂಧಿಸಿ ಕಾಲಬದ್ಧ ಕ್ರಿಯಾ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುವಂತೆ ರಾಷ್ಟ್ರಪತಿ ದ್ರೌಪದಿ ಮರ್ಮು ರಾಜ್ಯ ಸರಕಾರಕ್ಕೆ ಕಳೆದ ವರ್ಷ ಸೂಚಿಸಿದ್ದರು. ಆದರೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಯುವಜನತೆ ಉದ್ಯೋಗ ಇಲ್ಲದೆ ಮಾನಸಿಕ ಒತ್ತಡ ದಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡು ಬದುಕುವಂತಾಗಿದೆ ಎಂದು ಅವರು ದೂರಿದರು.

Oplus_0

ಧರಣಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಖಜಾಂಚಿ ದಿವಾಕರ ಕಳ್ತೂರು, ಮುಖಂಡರಾದ ಬೊಗ್ರ ಕೊಕ್ಕರ್ಣೆ, ಪ್ರಭಾಕರ್, ಕೆ.ಪುತ್ರನ್ ಹೆಬ್ರಿ, ಪವಿತ್ರಾ ಮೊದಲಾದವರು ಉಪಸ್ಥಿತರಿದ್ದರು.