ಕೇರಳ ವಯನಾಡಿನಲ್ಲಿ ಭಾರೀ ಭೂಕುಸಿತ: 19ಕ್ಕೂ ಹೆಚ್ಚು ಸಾವು, 50 ಮಂದಿಗೆ ಗಾಯ, ರಕ್ಷಣಾ ಕಾರ್ಯ ಮುಂದುವರಿಕೆ.

ಕೇರಳ: ಕೇರಳದ ವಯನಾಡ್ ಭಾರೀ ಭೂಕುಸಿತಗಳು ಸಂಭವಿಸಿದ ಪರಿಣಾಮ 19 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಹಾಗೂ 50 ಮಂದಿಗೆ ಗಾಯಗಳಾಗಿವೆ. ಇನ್ನೂ ಹಲವಾರು ಮಂದಿ ಜನರು ಸಿಲುಕಿರುವ ಶಂಕೆಯಿದೆ. ಇನ್ನುಳಿದವರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿಯುತ್ತಿದ್ದು, ಇದೀಗ ಏರ್’ಫೋರ್ಸ್ ಕೂಡ ಸಹಾಯ ಮಾಡಲಿದೆ.

ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಸೇರಿದಂತೆ ಹಲವು ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಎಲ್‌ಡಿಎಫ್ ಸರ್ಕಾರಕ್ಕೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಸಹಾಯ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಕೇಳಿದ್ದಾರೆ. ಈ ಸಂಬಂಧ ಕೇರಳದ ಬಿಜೆಪಿಯ ಏಕೈಕ ಸಂಸದ, ಕೇಂದ್ರ ಸಚಿವ ಸುರೇಶ್ ಗೋಪಿ ಅವರೊಂದಿಗೂ ಪ್ರಧಾನಿ ಮಾತನಾಡಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ ₹ 50,000 ನೀಡಲಾಗುವುದು.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್‌ಡಿಆರ್‌ಎಫ್ ಜೊತೆಗೆ, ಕಣ್ಣೂರು ರಕ್ಷಣಾ ಭದ್ರತಾ ದಳವೂ ರಕ್ಷಣಾ ಕಾರ್ಯಾಚರಣೆಗೆ ಸೇರಲು ಸಜ್ಜಾಗಿದೆ. ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ವಯನಾಡ್‌ಗೆ ತೆರಳಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.