ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಸದ್ಯ ಸಾಲು ಸಾಲು ಜಾತ್ರೆಗಳು. ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ತೂಟೆದಾರ ಒಂದು ವಿಶಿಷ್ಟ ಸಂಪ್ರದಾಯ. ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ತೂಟೆದಾರದಲ್ಲಿ ಅಧಿಕಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ವಾರ್ಷಿಕ ಉತ್ಸವದಲ್ಲಿ ಒಂದೊಂದು ದೇವಸ್ಥಾನದಲ್ಲಿ ಒಂದೊಂದು ವೈಶಿಷ್ಟ್ಯತೆ ಇದೆ. ಜಾತ್ರೆಯ ಕೊನೆಯ ಭಾಗದಲ್ಲಿ ತೂಟೆದಾರ ಅಂತ ಒಂದು ಸಂಪ್ರದಾಯ ನಡೆಯುತ್ತೆ. ಉಡುಪಿಯ ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತೂಟೆದಾರ ಸಂಪ್ರದಾಯದಂತೆ ಸಂಪನ್ನಗೊಂಡಿತು.
ತೆಂಗಿನ ಗರಿಯ ಪಂಜು ತಯಾರಿಸುತ್ತಾರೆ. ಇದನ್ನು ಆಡುಭಾಷೆಯಲ್ಲಿ ತೂಟೆ ಎಂದು ಕರೆಯಲಾಗುತ್ತೆ. ದೇವರು ಕಟ್ಟೆಪೂಜೆ ಸವಾರಿಗೆ ಹೊರಟು ನದಿ ಬದಿಯ ಗದ್ದೆಯಲ್ಲಿ ಎರಡು ಗುಂಪುಗಳು ಉರಿಯುತ್ತಿರುವ ಪಂಜುಗಳನ್ನು ಪರಸ್ಪರ ಎಸೆಯುತ್ತಾರೆ. ಒಂದು ರೀತಿ ಯುದ್ಧದಂತೆ ಕಂಡು ಬಂದರೂ ಇದು ಧಾರ್ಮಿಕ ಆಚರಣೆಯಾಗಿದೆ.
ಕೆಮ್ತೂರಿನ ತೂಟೆದಾರ ಕತ್ತಲಲ್ಲಿ ನಡೆಯುವ ಬಣ್ಣದ ಆಟದಂತೆ ಕಾಣುತ್ತೆ. ಕಾರಣ ಸುತ್ತಲೂ ಗಾಢ ಕತ್ತಲು. ಅದರ ಮಧ್ಯೆ ಕೇವಲ ಬೆಂಕಿಯ ಪುಂಜವೊಂದು ಆಕಡೆ ಈಕಡೆ ಹಾರಾಡುತ್ತಾ ಉಲ್ಕೆಯಂತೆ ಭಾಸವಾಗುತ್ತೆ. ಕಟೀಲು ದೇವಸ್ಥಾನದಲ್ಲಿ ನಡೆಯುವ ತೂಟೆದಾರವೂ ಬಹಳ ಪ್ರಸಿದ್ಧಿ. ಕರಾವಳಿಯ ದೇವಸ್ಥಾಗಳಲ್ಲಿ ವಾರ್ಷಿಕ ಜಾತ್ರೆ ಸಂದರ್ಭ ಆರೇಳು ದಿನ ನಿದ್ದೆ ಬಿಟ್ಟು ಉತ್ಸವದಲ್ಲಿ ದಣಿದ ಮಂದಿಗೆ ಈ ಪಂಜಿನಾಟ ಉಲ್ಲಾಸ ನೀಡುತ್ತೆ.












