ಕುಂದಾಪುರ: ತಾಲೂಕಿನ ಕುಂದಾಪುರ ಸಮೀಪ ಕೋಟ್ಯಾಂತರ ಮೌಲ್ಯದ ನಗ ನಗದು, ಬೆಳ್ಳಿ, ತಾಮ್ರದ ಸಾಮಾಗ್ರಿ ಬಟ್ಟೆ ಬರೆಗಳನ್ನು ವರದಕ್ಷಿಣೆಯಾಗಿ ಕೇಳಿ ಮದುವೆಯಾಗಿ ಆ ಬಳಿಕ ಚಿತ್ರಹಿಂಸೆ ನೀಡಿದ ಘಟನೆ ಕಸಬಾ ಕುಂದಾಪುರದಲ್ಲಿ ನಡೆದಿದೆ.
ಈ ಬಗ್ಗೆ ಮಹಿಳೆ ದೂರು ದಾಖಲಿಸಿ, ತನ್ನ ಗಂಡ, ಅತ್ತೆ ಮಾವನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾಳೆ ಎಂದು ತಿಳಿಯಲಾಗಿದೆ.
2019ರಲ್ಲಿ ಹರ್ಷವರ್ಧನ ಪಟ್ವಾಲ್ ಎಂಬಾತನ ಜೊತೆ ಮದುವೆಯಾಗಿತ್ತು. ವಿವಾಹ ಪೂರ್ವದಲ್ಲಿ ವರದಕ್ಷಿಣೆಯಾಗಿ ರೂಪಾಯಿ 50,00,000/- ಹಾಗೂ 40 ಪವನ್ ಚಿನ್ನಾಭರಣ ವಜ್ರದ ಕಿವಿಯೋಲೆಯನ್ನು ವರದಕ್ಷಿಣೆ ರೂಪದಲ್ಲಿ ನೀಡುವಂತೆ ಒತ್ತಾಯಿಸಿ ನಂತರ 20,00,000/- ರೂಪಾಯಿ ಮತ್ತು 23 ಪವನ್ ಚಿನ್ನಾಭರಣಗಳನ್ನು ಹಾಗೂ 35,000/- ರೂಪಾಯಿ ಬೆಲೆಯ ಬಟ್ಟೆ, ಬಳವಳಿಯಾಗಿ ಬೆಳ್ಳಿಯ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಪಡೆದುಕೊಂಡಿರುತ್ತಾರೆ.
ಮದುವೆಯ ನಂತರ ಗಂಡನ ಮನೆಯಲ್ಲಿ ಸ್ವಲ್ಪ ಸಮಯ ಇದ್ದು ಆ ನಂತರ, ಗಂಡ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾನೆ. ಆ ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾರೆ. ಆ ನಂತರದ ದಿನಗಳಲ್ಲಿಯೂ ಅತ್ತೆ ಮಲ್ಲಿಕಾ (63) ಹಾಗೂ ಮಾವ ಗಣಪತಿ ಪಟ್ವಾಲ್ (69) ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ ಮಹಿಳೆ ವಿವಾಹ ವಿಚ್ಚೇದನಾಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮಾನಸಿಕ ಹಿಂಸೆ ನೀಡಿ ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2023 ಕಲಂ: 498(ಎ), 504 ಜೊತೆಗೆ 34 ಐಪಿಸಿ & 3,4,6 ಡಿ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.