ಉಡುಪಿ: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್ ನಿರ್ಮಾಣದ ಪ್ರಸ್ತಾಪಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರೇ ನೇರ ಹೊಣೆ. 2019ರ ಆಗಸ್ಟ್ ತಿಂಗಳಿನಿಂದ 2023ರ ಮೇ ತಿಂಗಳವರೆಗೆ ಇವರ ಕೈಯಲ್ಲಿ ಡಬಲ್ ಇಂಜಿನ್ ಸರಕಾರವಿದ್ದರೂ ಟೋಲ್ ನಿರ್ಮಾಣದ ಪ್ರಸ್ತಾಪವನ್ನು ಶಾಶ್ವತವಾಗಿ ರದ್ದುಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪಾಡಿ ನೇಮಿರಾಜ್ ರೈ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಪ್ರಸ್ತಾಪವು 2010ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ರೂಪುರೇಷೆಗೊಂಡಿತ್ತು. ಅಲ್ಲದೆ, 2019ರ ಆಗಸ್ಟ್ ತಿಂಗಳಿನಿಂದ 2023ರ ಮೇ ತಿಂಗಳವರೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಸರಕಾರವಿತ್ತು.
ಶಾಸಕ ಸುನಿಲ್ ಕುಮಾರ್ ಅವರ ಕೈಯಲ್ಲಿ ಡಬಲ್ ಇಂಜಿನ್ ಸರಕಾರವಿದ್ದರೂ ಟೋಲ್ ನಿರ್ಮಾಣದ ಪ್ರಸ್ತಾಪವನ್ನು ಶಾಶ್ವತವಾಗಿ ರದ್ದುಗೊಳಿಸಲು ಸಾಧ್ಯವಾಗಿಲ್ಲ. ಆದರೆ ಇದೀಗ ತಾವು ಟೋಲ್ ಗೇಟ್ ವಿರೋಧಿಗಳಂತೆ ಬಿಂಬಿಸಿ, ತಾವೇ ಪ್ರತಿಭಟಿಸುವ ಮೂಲಕ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನವರು ಬಿಜೆಪಿಯನ್ನು ದೂರುತ್ತಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ನವರನ್ನು ದೂರುತ್ತಿದ್ದಾರೆ. ಆದರೆ ಶಾಶ್ವತ ಟೋಲ್ ರದ್ದು ಮಾಡಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಈ ಟೋಲ್ ಗೇಟ್ ಪ್ರಸ್ತಾಪ ಬರಲು ನೂರಕ್ಕೆ ಶೇ. 97ರಷ್ಟು ಹಿಂದಿನ ಬಿಜೆಪಿ ಸರಕಾರ ಹಾಗೂ ಬಿಜೆಪಿ ಮುಖಂಡರೇ ನೇರ ಹೊಣೆ. ಅದರಲ್ಲೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಜವಾಬ್ದಾರಿ ಪ್ರಮುಖವಾಗಿದೆ ಎಂದು ದೂರಿದರು.