ಕಾರ್ಕಳ, ಆ.25: ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವತಿಯ ಬ್ಲಡ್ ಟೆಸ್ಟ್ ರಿಪೋರ್ಟ್ ನಲ್ಲಿ ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದ್ದು, ಪ್ರಥಮ ಆರೋಪಿಯಾದ ಅಲ್ತಾಫ್ ಬ್ಲಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.
ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿಯ ಬ್ಲಡ್ ರಿಪೋರ್ಟ್ ನೆಗೆಟಿವ್ ಎಂದು ಬಂದಿರುತ್ತದೆ. ಯುವತಿಯ ಬ್ಲಡ್ ಸ್ಯಾಂಪಲ್ ನಲ್ಲಿ ಮಾದಕ ದ್ರವ್ಯ ಪಾಸಿಟಿವ್ ಬಂದಿರುವ ಬಗ್ಗೆ ಆರೋಪಿ ಅಲ್ತಾಫ್ ನನ್ನು ಕಷ್ಟಡಿಗೆ ನಿನ್ನೆ ತೆಗೆದುಕೊಂಡು ವಿಚಾರಿಸಲಾಗಿ, ಅವನು ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿದ್ದು ಎಂದು ಹೇಳಿದ್ದಾನೆ. ಈ ಪುಡಿಯನ್ನು ನಾವು ಎಫ್ಎಸ್ಎಲ್ ಗೆ ಕಳಿಸಿ, ಅದು ಯಾವ ಡ್ರಗ್ಸ್ ಎಂದು ವೆರಿಫೈ ಮಾಡುತ್ತೇವೆ ಮತ್ತು ಇದೇ ಡ್ರಗ್ ಅನ್ನು ಹುಡುಗಿ ತೆಗೆದುಕೊಂಡಿರುವ ಬಗ್ಗೆ ತುಲನೆ ಮಾಡಲು ಕಳುಹಿಸುತ್ತೇವೆ. ಇದರ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಒಂದು ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಡ್ರಗ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಪೂರ್ಣ ತನಿಖೆ ಮಾಡಿ ಆದಷ್ಟು ಬೇಗನೆ ಈ ಕೇಸನ್ನು ಪತ್ತೆ ಮಾಡಲಾಗುವುದು. ನೊಂದ ಯುವತಿಯು ಜಡ್ಜ್ ಮುಂದೆ ಹೇಳಿಕೆ ಕೊಡುವುದು ಬಾಕಿ ಇದ್ದು ಅವರು ಮೆಡಿಕಲಿ ಫಿಟ್ ಆದ ನಂತರ ನ್ಯಾಯಾಂಗದ ಮುಂದೆ ಹಾಜರುಪಡಿಸಿ, ಆದಷ್ಟು ಬೇಗನೆ ಈ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದೆಂದು ಎಸ್ಪಿ ಹೇಳಿದ್ದಾರೆ.