ಉಡುಪಿ: ಕಾಂತಾರ ಚಾಪ್ಟರ್- 1 ಚಿತ್ರದ ಜ್ಯೂನಿಯರ್ ಆರ್ಟಿಸ್ಟ್ ಗಳಿಗೆ ಹೊಂಬಾಳೆ ಸಂಸ್ಥೆ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಕಾಂತಾರ ಪ್ರೀಕ್ವೆಲ್ ನಲ್ಲಿ ಭಾಗಿಯಾಗಿರುವ ಜ್ಯೂನಿಯರ್ ಆರ್ಟಿಸ್ಟ್ ಗಳು ಈ ಸಂಬಂಧ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಕುಂದಾಪುರ ತಾಲೂಕಿನ ಕೆರಾಡಿಯಲ್ಲಿ ನಡೆಯುತ್ತಿದೆ. ತಮಗೆ ಪೇಮೆಂಟ್ ಸಿಕ್ಕಿಲ್ಲ ಎಂದು ಆರೋಪಿಸಿರುವ ಜ್ಯೂನಿಯರ್ ಆರ್ಟಿಸ್ಟ್ ಗಳು ಪ್ರತಿಭಟನೆ ನಡೆಸಿದ್ದು ಇದು ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದೆ.
ಜ್ಯೂನಿಯರ್ ಕಲಾವಿದರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ, ದೂರದಿಂದ ಶೂಟಿಂಗ್ ಗೆ ಕರೆಸಿಕೊಂಡು ಬಂದು ಶೂಟಿಂಗ್ ಮಾಡಿಸಿ ಪೇಮೆಂಟ್ ಕೊಡದೇ ಕಳುಹಿಸುತ್ತಿದ್ದಾರೆ ಎಂದು ಜೂನಿಯರ್ ಅರ್ಟಿಸ್ಟ್ ಗಳು ಹೊಂಬಾಳೆ ಸಂಸ್ಥೆ ಬಗ್ಗೆ ಆರೋಪ ಮಾಡಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಮೂಲಕ ಅಸಮಾಧಾನ ಹೊರ ಹಾಕಿರುವ ಚಿತ್ರದ ಜ್ಯೂನಿಯರ್ ಕಲಾವಿದರೊಬ್ಬರು ಬೆಂಗಳೂರು, ಕೇರಳದಿಂದ ಜ್ಯೂನಿಯರ್ ಕಲಾವಿದರನ್ನು ಕರೆಸಿದ್ದಾರೆ.
ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡುತ್ತಿಲ್ಲ. ಮಹಿಳಾ ಕಲಾವಿದರಿಗೂ ಪೇಮೆಂಟ್ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಸರಿಯಾಗಿ ಊಟವನ್ನೂ ಕೊಡುತ್ತಿಲ್ಲ. ಚಿತ್ರೀಕರಣ ಇದೆ ಎಂದು ಕರೆಸಿ ವಾಪಸ್ಸು ಕಳುಹಿಸುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಜ್ಯೂನಿಯರ್ ಆರ್ಟಿಸ್ಟ್ ಒಬ್ಬರು ವಿಡಿಯೋ ಮೂಲಕ ಅಸಮಾಧಾನ ಹೊರಹಾಕಿದ್ದಾರೆ