ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕಂಚಿನಡ್ಕ ಎಂಬಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ವಿರುದ್ಧ ಟೆಂಪೋ ಮತ್ತು ಲಾರಿ ಚಾಲಕರ ಸಂಘ ಪ್ರತಿಭಟನೆಗೆ ಸಜ್ಜಾಗಿದೆ. ಇದೇ ತಿಂಗಳ 24ರಂದು ಹೊಸ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಸಂಘಟಕ ರಾಘವೇಂದ್ರ ಶೆಟ್ಟಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಮೂರು ಟೋಲ್ ಗೇಟ್ ಗಳಿದ್ದು ಪಕ್ಕದ ದಕ್ಷಿಣ ಕನ್ನಡದಲ್ಲೂ ಟೋಲ್ ಗೇಟ್ ಗಳಿವೆ. ಪ್ರಕೃತಿ ವಿಕೋಪ, ದಿನ ವಸ್ತುಗಳ ಬೆಲೆ ಏರಿಕೆ, ಸರಕಾರದ ಕ್ರಮಗಳಿಂದಾಗಿ ಹೈರಾಣಾಗಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಹೆಜಮಾಡಿ ಟೋಲ್ ಗೇಟ್ ನಿಂದ ಕೇವಲ 5 – 10 ಕಿಮೀ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ಮತ್ತೊಂದು ಟೋಲ್ ನಿರ್ಮಿಸಿ, ಜನರನ್ನು ಸುಲಿಗೆ ಮಾಡಲು ಹೊರಟಿರುವುದು ರಾಜ್ಯ ಸರಕಾರದ ನಿರ್ಧಾರ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಲಾರಿ ಆ್ಯಂಡ್ ಟೆಂಪೋ ಮಾಲಕರು ಜಿಪಿಎಸ್, ಟೋಲ್ ಶುಲ್ಕ, ವಿಮೆ ಮೊದಲಾದ ತೆರಿಗೆಗಳ ಭಾರಕ್ಕೆ ಕುಸಿದು ಹೋಗಿದ್ದಾರೆ. ಇದೀಗ ಮತ್ತೊಂದು ಟೋಲ್ ಅನ್ನು ಅವರ ಮೇಲೆ ಹೇರುವ ಮೂಲಕ ರಾಜ್ಯ ಸರಕಾರ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು. ರಕ್ತ ಬೇಕಾದರೂ ಕೊಡುತ್ತೇವೆ. ಆದರೆ ಟೋಲ್ ನಿರ್ಮಿಸಲು ಬಿಡುವುದಿಲ್ಲ ಎಂದು ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಮೇಶ್ ಶೆಟ್ಟಿ ಉಡುಪಿ, ಸತೀಶ್ ಪೂಜಾರಿ ಕುಂದಾಪುರ, ವಿಜಯ್ ಕುಮಾರ್ ಬ್ರಹ್ಮಾವರ, ಮನೋಹರ್ ಕುಂದರ್ ಉಡುಪಿ ಉಪಸ್ಥಿತರಿದ್ದರು.












