ಕಾರ್ಕಳ: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯರಿಗೆ ನಗರ ನಕ್ಸಲರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿರುವ ಪ್ರೀತಿಯೇ ಕಾರಣವಾಗಿದೆ ಎಂದು ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ನ ಬಳಿಕ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ದೇಶವಿರೋಧಿ ಕೃತ್ಯಗಳ ಬೆಂಬಲಿಸುತ್ತಿದ್ದಾರೆ. ಇದು ಪಶ್ಚಿಮ ಘಟ್ಟದ ಗ್ರಾಮಗಳ ಶಾಂತಿ ಕೆಡಿಸುತ್ತಿದೆ. ಸ್ಥಳೀಯರ ಬೆಂಬಲವಿಲ್ಲದೆ ಅಳಿದು ಹೋಗುವ ಹಂತಕ್ಕೆ ತಲುಪಿದ್ದ ನಕ್ಸಲ್ ಚಟುವಟಿಕೆ ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಪೌಷ್ಟಿಕ ಆಹಾರ ಮೆದ್ದು ಎದ್ದು ನಿಂತಿದೆ. ಹದಿನೈದು ವರ್ಷಗಳ ಬಳಿಕ ನಕ್ಸಲ್ ಚಟುವಟಿಕೆ ಇಷ್ಟು ಬಹಿರಂಗವಾಗಿ ಕಾಣಿಸಿಕೊಳ್ಳಲು ಕಾರಣವನ್ನು ಸರಕಾರ ತಿಳಿಸಬೇಕಿದೆ ಎಂದು ಆಗ್ರಹಿಸಿದರು.
ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಬೇಕು. ಪಶ್ಚಿಮ ಘಟ್ಟ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸರಕಾರ ಹೆಚ್ಚಿನ ಕಾಳಜಿ ವಹಿಸಬೇಕು ಒತ್ತಾಯಿಸಿದ ಅವರು ಕಬ್ಬಿನಾಲೆ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜೀವದ ಹಂಗು ತೊರೆದು ದೇಶ ವಿರೋಧಿ ಶಕ್ತಿಗಳ ಯಾವುದೇ ಮುಲಾಜಿಗೆ ಒಳಗಾಗದೆ ಹತ್ತಿಕ್ಕಿದ ಪೊಲೀಸರ ಕಾರ್ಯ ವೈಖರಿ ಶ್ಲಾಘನೀಯ ಎಂದು ತಿಳಿಸಿದ್ದಾರೆ.