ಉಡುಪಿ : ಇಲ್ಲಿಯ ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಕಾರ್ಕಳ ಸಹಿತ ವಿವಿಧ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಇಂದು ಮುಂಜಾನೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು.
ಮೃತರು, ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷರಾಗಿರುವ ಪತಿ ಲಾರೆನ್ಸ್ ಡೆಸಾ, ಪುತ್ರ, ಪುತ್ರಿ, ವಿದ್ಯಾರ್ಥಿ ಸಮುದಾಯ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಉದ್ಯಾವರ ಚರ್ಚಿನಲ್ಲಿ ನಡೆಯಲಿದೆ.