ಉಡುಪಿ: ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಶುಕ್ರವಾರ ಅಜ್ಜರಕಾಡುವಿನ ವಿದ್ಯಾವಾಚಸ್ಪತಿ ಡಾ.
ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್ ಎ.ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ತಮ್ಮ ಬಹುಪಾಲು ಸಮಯವನ್ನು ಪುಸ್ತಕಗಳನ್ನು ಓದುವುದರ ಮೂಲಕ
ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಸ್ಥಳೀಯ ಗ್ರಂಥಾಲಯಗಳಿಗೆ ಹೋಗಿ ಅಲ್ಲಿಯ ಉತ್ತಮ ಗ್ರಂಥಗಳ ಮಾಹಿತಿಯನ್ನು ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದ ಅವರು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ ಗ್ರಂಥಾಲಯಕ್ಕೆ ಬಂದು ಪುಸ್ತಕ ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ಗ್ರಂಥಾಲಯದಲ್ಲಿ ದೊರಕುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯವು ಜ್ಞಾನ ದೇಗುಲ ಮಾತ್ರವಲ್ಲ,
ಮನುಷ್ಯನ ಮನಸ್ಸನ್ನು ಸದೃಢಮಾಡುವ ಭಂಡಾರವಿದ್ದಂತೆ. ಮನಸ್ಸನ್ನು ಸಧೃಡ ಮಾಡಿಕೊಂಡಲ್ಲಿ ನಾವು ಗುರಿ ತಲುಪಲು ಸಾಧ್ಯ
ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಪ್ರಸಾದ್ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವಿಭಾಗಗಳಿದ್ದು, ಬಹಳಷ್ಟು ಪುಸ್ತಕಗಳು ಲಭ್ಯವಿರುತ್ತದೆ. ಗ್ರಂಥಾಲಯದಲ್ಲಿ ವಿವಿಧ ರೀತಿಯ ಕಾರ್ಯಾಗಾರಗಳ ಆಯೋಜನೆ ಸಾರ್ವಜನಿಕರು
ಗ್ರಂಥಾಲಯದತ್ತ ಆಕರ್ಷಿತರಾಗುವಂತೆ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಂಥಪಾಲಕಿ ರಂಜಿತ ಸಿ, ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್., ಕೆ.ಎಂ.ಮಾರ್ಗ ಶಾಖೆಯ ಮೇಲ್ವಿಚಾರಕಿ
ವಿದ್ಯಾ, ಪುತ್ತೂರು ಶಾಖೆಯ ಲಕ್ಷ್ಮಿ ಅಜ್ಜರಕಾಡು ಶಾಖೆಯ ಹರ್ಷಿತಾರಾವ್ ಹಾಗೂ ಮೀನಾಕ್ಷಿ ಇವರಿಗೆ ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ನೀಡಿ ಹಾಗೂ ಉತ್ತಮ ಓದುಗರಾಗಿ ಚಿತ್ತರಂಜನ್ ದಾಸ್ ಮಲ್ಯ, ಬಾಲಕೃಷ್ಣ ಶಿರ್ವ, ಯು. ರೇವತಿ, ಮಾ. ಮಹಿತ್ ಇವರನ್ನು ಸನ್ಮಾನಿಸಲಾಯಿತು.
ಅಜ್ಜರಕಾಡು ಗ್ರಂಥಾಲಯ, ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯ ಮತ್ತು ಕೆ.ಎಂ.ಮಾರ್ಗ ಶಾಖಾ ಗ್ರಂಥಾಲಯದಲ್ಲಿ ಶಾಲಾ – ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಹಾಗೂ ಹಿರಿಯ ಸಾಹಿತಿ ಮಾಧವಿ ಭಂಡಾರಿ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ನಿಕೇತನ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಗ್ರಂಥಪಾಲಕಿ ರಂಜಿತ ಸಿ ನಿರೂಪಿಸಿದರೆ, ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್ ವಂದಿಸಿದರು.