ಉಡುಪಿ: ನ್ಯಾಶನಲ್ ಕನ್ಸ್ಯೂಮರ್ ಫೇರ್ (ಎನ್ ಸಿಎಫ್) ಉಡುಪಿ ವತಿಯಿಂದ ಕರಾವಳಿ ಬೈಪಾಸ್ ಬಳಿಯ ರಾ.ಹೆ. 66ರ ಸನಿಹದ ಶಾರದಾ ಇಂಟರ್ ನ್ಯಾಶನಲ್ ಹೋಟೆಲ್ ಸಮೀಪದ 10 ಎಕರೆ ಜಾಗದಲ್ಲಿ ಆರಂಭಗೊಂಡ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ, ಸಾಂಸ್ಕೃತಿಕ ಮೇಳ ಒಳಗೊಂಡ ಉಡುಪಿ ಉತ್ಸವದಲ್ಲಿ ನೀರೊಳಗಿನ ಮೀನು ಸುರಂಗ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿದೆ.
ಇಲ್ಲಿ ಆಟವಾಡಲು ಇಟಾಲಿಯನ್ ಟೊರಾಟೊರಾ, ಡ್ರ್ಯಾಗನ್ ಕಾರ್, ತ್ರಿಡಿ ಸಿನಿಮಾ, ಜಾಯಿಂಟ್ ವ್ಹೀಲ್, ಡ್ರ್ಯಾಗನ್ ವ್ಹೀಲ್, ಬ್ರೇಕ್ ಡ್ಯಾನ್ಸ್, ಮಿನಿ ಟ್ರೈನ್, ಹಿಪ್ಟೋಸ್ಲೈಡ್, ಝಿಗ್ ಝ್ಯಾ ಗ್, ಎಲೆಕ್ಟ್ರಿಕಲ್ ಟ್ರೈನ್, ಕಪ್ಪೆ ಸವಾರಿ, ಟೈಟಾನಿಕ್ ಝಿಗ್ ಝಾಗ್, 150ಮೀ. ಉದ್ದದ ಬಲೂನು, ಡ್ರ್ಯಾಗನ್ ಬಲೂನು ಹಾಗೂ ರಿಂಗ್ ಗೇಮ್, ಶೂಟಿಂಗ್ ಗೇಮ್ ಇತ್ಯಾದಿಗಳಿವೆ.ಮಕ್ಕಳ, ಯುವಜನರ ಅಚ್ಚುಮೆಚ್ಚಿನ ಫಾಸ್ಟ್ ಫುಡ್, ವೈವಿಧ್ಯಮಯ ಆಹಾರ ಸಾಮಗ್ರಿಗಳು, ಎಲ್ಲ ವಯೋಮನದವರು ದಿನನಿತ್ಯ ಬಳಸುವ ಎಲ್ಲ ಬಗೆಯ ವಸ್ತು ಗಳ ನೂರಾರು ಮಳಿಗೆಗಳಿವೆ.
ಆಕರ್ಷಕ ಸೆಲ್ಫಿ ಚಿತ್ರಗಳು, ಪ್ರಾಣಿಗಳ ಲೋಕ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ಫಿಶ್ ಸ್ಪಾ ಮಸಾಜ್ ಸೇರಿದಂತೆ ಇನ್ನಷ್ಟು ಆಕರ್ಷಣೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ರ ತನಕ ನಡೆಯಲಿರುವ ಉತ್ಸವದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮೀನುಗಳ ಲೋಕ
ಉತ್ಸವದ ಪೆಂಡಾಲ್ ಒಳಗೆ ಪ್ರವೇಶಿಸುತ್ತಿದ್ದಂತೆ ನೀರೊಳಗೆ ಮೀನು ಸುರಂಗ ಕಾಣ ಸಿಗುತ್ತದೆ. ಇದರ ಉದ್ದಕ್ಕೂ ಅಕ್ವೇರಿಯಂನಲ್ಲಿ ಸಾಕುವ ಬೆಲೆ ಬಾಳುವ ಆಕರ್ಷಕ ಬಣ್ಣಗಳ 50ಕ್ಕೂ ಹೆಚ್ಚು ವೈವಿಧ್ಯಮಯ ಮೀನುಗಳು ಅತ್ತಿಂದಿತ್ತ ಓಡಾಡುವ ದೃಶ್ಯ ಮನಮೋಹಕವಾಗಿದೆ. ಟೀಪೋಯ್, ಕಾರ್ಪ್, ಕೋಯಿ ಕಾರ್ಪ್, 4 ವರ್ಣಗಳಾದ ವಿವಿಧ ಕೆಂಪು, ಕಪ್ಪು, ಹಳದಿ, ಬಿಳಿ+ಕೆಂಪು) ಗ್ರಿಡೊ ಮತ್ತು ಪಾಸ್ಕರ್ ಮೀನುಗಳು, ಪಿರಾನ, ರೆಡ್ ಕ್ಯಾಪ್, ವೈಟ್ ಕ್ಯಾಪ್, ಪುಲಿವಾಯ್, ಗೋಲ್ಡನ್ ಫಿಶ್, ಬ್ಲ್ಯಾಕ್ ಫಿಶ್, ವೈಟ್ ಶಾರ್ಕ್ ಸೇರಿದಂತೆ ಇನ್ನು ಹಲವಾರು ಬಗೆಯ ಮೀನುಗಳಿಗೆ. ಸುರಂಗದಲ್ಲಿ ಒಮ್ಮೆಲೆ ಕಣ್ಮುಚ್ಚಿ ಕಣ್ತೆರೆದರೆ ಸಮುದ್ರದೊಳಗೆ ಇದ್ದಂತೆ ಗೋಚರಿಸುತ್ತದೆ. ಈ ಮೀನುಗಳ ಲೋಕ ಮಕ್ಕಳ ಮನಸೂರೆಗೊಳ್ಳಲಿದೆ.