ಉಡುಪಿ: ವರನಟ ಡಾ. ರಾಜ್ ಕುಮಾರ್ ಅವರ ಮೇರುವ್ಯಕ್ತಿತ್ವ, ಕನ್ನಡಾಭಿಮಾನ, ಭಾಷಾಪ್ರೇಮ ಹಾಗೂಸಮಾಜಮುಖಿ ಕಾರ್ಯಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಗುರುವಾರ ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್ ಕುಮಾರ್ ರವರ 97 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಡಾ. ರಾಜ್ ಕುಮಾರ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ರಾಜಕೀಯದಲ್ಲಿ ಭಾಗವಹಿಸದೇ, ಚಿತ್ರರಂಗ ಎಂಬಒಂದೇ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು, ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪೂರ್ಣ ಪರಿಶ್ರಮ ವಹಿಸಿ, ಯಶಸ್ಸುಸಾಧಿಸಿದ್ದಾರೆ. ಅದೇ ನಿಟ್ಟಿನಲ್ಲಿ ಯುವಪೀಳಿಗೆಯು ಸಹ ಜೀನವದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡುವುದುರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ, ಸುತ್ತಮುತ್ತಲಿನ ಪರಿಸರಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.ಜೀವನವೇ ಒಂದು ನಾಟಕವಿದ್ದಂತೆ. ಅದರಲ್ಲಿ ನಾವು ಕಲಾವಿದರುಗಳು. ಜೀವನದ ನಾಟಕದಲ್ಲಿ ನಮ್ಮ ನಮ್ಮ ಪಾತ್ರಗಳನ್ನುಮುಂದಾಳತ್ವ ವಹಿಸಿ, ಉತ್ತಮವಾಗಿ ನಿರ್ವಹಿಸಿದಾಗ ಮಾತ್ರ ಸುಂದರ ಭವಿಷ್ಯ ಕಟ್ಟಿಕೊಳ್ಳು ಸಾಧ್ಯ. ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಜ್ಜೆಇಡಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್ ಕುಮಾರ್ ಅವರು, ಕನ್ನಡಚಿತ್ರರಂಗದಲ್ಲಿ ಸುಮಾರು 5 ದಶಕಗಳ ಕಾಲ ನಟನೆಯನ್ನು ಮಾಡಿದ್ದು, 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿಅಭಿನಯಿಸಿದ್ದಾರೆ. ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದವರಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದರು.
1942 ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬಾಲ ನಟರಾಗಿ ನಟಿಸುವ ಮೂಲಕ ವೃತ್ತಿ ಆರಂಭಿಸಿದ ಇವರ ಬಹುತೇಕ ಚಲನಚಿತ್ರಗಳುಸಮಾಜದಲ್ಲಿ ಸುಧಾರಣೆ ತರುವಂತಹ ಸಂದೇಶಗಳನ್ನು ಸಾರಿವೆ. ಇವರು ಕೇವಲ ನಟರಲ್ಲದೇ ಗಾಯಕರೂ ಆಗಿದ್ದು, ಚಲನಚಿತ್ರಗೀತೆಗಳುಹಾಗೂ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಭಾರತ ಸರ್ಕಾರ ಕೊಡಮಾಡುವ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ನಟಿಸಿದ ಬಂಗಾರದ ಮನುಷ್ಯ ಚಲನಚಿತ್ರವು ಸುಮಾರು ಎರಡು ವರ್ಷಗಳ ಕಾಲ ಬೆಳ್ಳಿಪರದೆಯ ಮೇಲೆ ನಿರಂತರವಾಗಿ ಮೂಡಿಬಂದಿದೆ. ಅವರು ಸಮಾಜಮುಖಿ ಕಾರ್ಯಗಳಿಗೂ ಕೈಜೋಡಿಸಿದ್ದಾರೆ. ಗೋಕಾಕ್ ಚಳುವಳಿಯಲ್ಲಿಭಾಗವಹಿಸಿ, ಕನ್ನಡ ಭಾಷೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿದ್ದರು. ಡಾ. ರಾಜ್ ಕುಮಾರ್ ಅವರ ಬದುಕು ಸಾಧನೆ, ಭಾಷಾಭಿಮಾನಸೇರಿದಂತೆ ಅವರ ವ್ಯಕ್ತಿತ್ವ ಎಲ್ಲಾ ವಯೋಮಾನದವರಿಗೂ ಸ್ಪೂರ್ತಿಯಾಗಿದೆ ಎಂದರು.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭವ್ಯಾ ನಾಗರಾಜ್ ಉಪನ್ಯಾಸ ನೀಡಿ ಮಾತನಾಡುತ್ತಾ,ಆಡುಮುಟ್ಟದ ಸೊಪ್ಪಿಲ್ಲ, ಡಾ. ರಾಜ್ ಕುಮಾರ್ ನಿರ್ವಹಿಸದ ಪಾತ್ರಗಳಿಲ್ಲ. ಎಂಬಂತೆ ನಟನೆ, ಗಾಯನ, ಚಿತ್ರನಿರ್ಮಾಣದಲ್ಲಿತಮ್ಮನ್ನು ತೊಡಗಿಸಿಕೊಂಡ ಅವರು, ಕನ್ನಡಚಿತ್ರರಂಗವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಖ್ಯಾತಿ ಮೇರುನಟ ಡಾ. ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ತಂದೆಯ ಪ್ರಭಾವ ಡಾ. ರಾಜ್ ಕುಮಾರ್ ಅವರ ಮೇಲೆ ಅಗಾಧ ಪರಿಣಾಮ ಬೀರಿತ್ತು. ಮನೆಯಲ್ಲಿ ಬಡತನ ಇದ್ದಿದ್ದರಿಂದ ನಾಲ್ಕನೇತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಅವರು, ನಾಟಕಮಂಡಳಿಯನ್ನು ಸೇರಿಕೊಳ್ಳುತ್ತಾರೆ. 1942 ರಲ್ಲಿ ಭಕ್ತಪ್ರಹ್ಲಾದ ಚಿತ್ರದಲ್ಲಿ ಬಾಲನಟನಾಗಿ ಚಿತ್ರೋದ್ಯಮಕ್ಕೆ ಪ್ರವೇಶ ಮಾಡುವುದರೊಂದಿಗೆ ಎಲ್ಲಾ ಹಿರಿಯ ನಟಿಯರೊಂದಿಗೂ ನಾಯಕನಟನಾಗಿ ತೆರೆ ಹಂಚಿಕೊಂಡಿದ್ದಾರೆ ಎಂದರು.
ಡಾ. ರಾಜ್ ಕುಮಾರ್ ಅವರನ್ನು ಸಾಂಸ್ಕೃತಿಕ ನಾಯಕರೆಂದೇ ಕರೆಯಲಾಗುತ್ತದೆ. 1930-40 ರಲ್ಲಿ ಕನ್ನಡ ಭಾಷೆಯ ಚಿತ್ರಗಳನ್ನುಹೊರತುಪಡಿಸಿ, ಬೇರೆ ಬಾಷೆಯ ಚಿತ್ರಗಳೇ ಹೆಚ್ಚು ಬಿಡುಗಡೆಯಾಗುತ್ತಿದ್ದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಜೀವ ಕಳೆಯನ್ನುತುಂಬಿದವರು ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಹಾಗೂ ಉದಯ್ ಕುಮಾರ್ ಅವರು. ಕನ್ನಡ ಭಾಷೆ, ನುಡಿಗೆ ಅವರ ನೀಡಿದಪಾಮುಖ್ಯತೆ ಸಿನಿಮಾ ಮಾಧ್ಯಮ ಮೂಲಕ ಜನರನ್ನು ತಲುಪಿತು ಎಂದರು.ಡಾ. ರಾಜ್ ಕುಮಾರ್ ಅವರ ಕಥಾವಸ್ತುವಿನ ಆಯ್ಕೆ ವಿಭಿನ್ನವಾದುದು. ಅದು ಜನಸಾಮಾನ್ಯರ ಮೇಲೆ ಪರಿಣಾಮ ಬೀರುವಂತದ್ದಾಗಿತ್ತು.ಜನಪದ, ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ನಿರಾಳವಾಗಿ ಅಭಿನಯಿಸುತ್ತಿದ್ದರು. ಸಮಾಕಾಲೀನ ವಿಷಯಗಳಿಗೆ ತಕ್ಕಂತೆ ಸಿನಿಮಾದಲ್ಲಿನಟಿಸುವುದರೊಂದಿಗೆ ಸಿನಿಪ್ರಿಯರು ಅವರನ್ನು ಮಾದರಿ ವ್ಯಕ್ತಿಯಾಗಿ ನೋಡುತ್ತಿದ್ದರು ಎಂದ ಅವರು, ಧರ್ಮಾರ್ಥವಾಗಿ,ಸಹಾಯಾರ್ಥವಾಗಿ ಅನೇಕ ರಸಮಂಜರಿ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ ಎಂದರು.
ಪ್ರೌಢಶಾಲೆ ಹಂತದವರೆಗೆ ಕನ್ನಡ ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಬೇಕು ಎಂಬ ವಿ.ಕೃ ಗೋಕಾಕ್ ವರದಿಯ ಜಾರಿಗೆ ಸರ್ಕಾರಹಿಂದೇಟು ಹಾಕಿದಾಗ, ಅಂತಹ ಸಂದರ್ಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಡಾ ರಾಜ್ ಕುಮಾರ್, ಚಿತ್ರೋದ್ಯಮ,ಜನಸಾಮಾನ್ಯರನ್ನು ಚಳುವಳಿಯಲ್ಲಿ ಒಟ್ಟುಗೂಡಿಸುವ ಮೂಲಕ ಸಮುದಾಯದ ನಾಯಕರಾದರು. ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದ ಇವರು, ವಿನಯವಂತರೂ, ಸದ್ಗುಣಿಗಳೂ ಆಗಿದ್ದರು. ತಮ್ಮ 78 ನೇ ವಯಸ್ಸಿನಲ್ಲಿ ತೀರಿಕೊಂಡರೂ ಸಹ ಇಂದಿಗೂ ತಮ್ಮ ನಟನೆಯ ಮೂಲಕ ಪ್ರತಿಯೊಬ್ಬ ಸಿನಿಪ್ರಿಯರಲ್ಲೂ ಜೀವಂತರಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಶ್ರೀಧರ ಪ್ರಸಾದ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ರಾಜ್ ಕುಮಾರ್ ಅವರ ಬಗ್ಗೆ
ಗೊತ್ತಿಲ್ಲದ ಮನುಜರಿಲ್ಲ. ಪ್ರತಿಯೊಬ್ಬ ಕನ್ನಡನಾಡಿನ ಮನೆ ಮನಗಳಲ್ಲಿ ಅಜರಾರಮರಾಗಿದ್ದಾರೆ. ಅವರು ನಡೆದು ಬಂದ ಹಾದಿ, ಅವರ ಸವಿವರಗಳನ್ನು ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪ್ರತೀ ವರ್ಷ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಅವರ ಸಿನಿಮಾಗಳು ಅರ್ಥಪೂರ್ಣವಾಗಿರುತ್ತಿದ್ದವು ಜೊತೆಗೆ ಮನೆಮಂದಿಯೆಲ್ಲಾ ಕುಳಿತು ಅವರ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂದರು.
ಭಾಗ್ಯಲಕ್ಷ್ಮಿ ಉಪ್ಪೂರು ಹಾಗೂ ರೋಹಿತ್ ಮಲ್ಪೆ ಇವರಿಂದ ಡಾ. ರಾಜ್ಕುಮಾರ್ ಗೀತ ಗಾಯನ ನಡೆಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿನಿಯರು, ವಾರ್ತಾ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು
ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಗಳಾದ ದಿಯಾ, ದಿಶಾ ಹಾಗೂ ಶ್ರೀಪದ ನಾಡಗೀತೆ ಹಾಡಿದರು, ಕಾಲೇಜಿನ ಪ್ರೊ. ಡಾ. ರಾಜೇಂದ್ರ ಕೆ ನಿರೂಪಿಸಿದರೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕಲಾನಿಕಾಯ ಡೀನ್ ಪ್ರೊ. ನಿಕೇತನ ವಂದಿಸಿದರು.












