ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಮಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಆ್ಯಂಡ್ ಡೆವಲಪ್ಮೆಂಟ್ ಸಂಸ್ಥೆಯೊಂದಿಗೆ ದಿನಾಂಕ 22 ಪೆಬ್ರವರಿ 2025 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ್ಯ ತರಬೇತಿ ನೀಡುವುದಾಗಿದೆ.
ಎರಡೂ ಸಂಸ್ಥೆಗಳು ಇಂದಿನ ಕ್ರಿಯಾತ್ಮಕ ವ್ಯಾಪಾರ ಪರಿಸರದ ಸಾಮಾಜಿಕ ಅಗತ್ಯಗಳಿಗೆ ಹೊಂದಿಕೆಯಾಗುವ ಪರಿವರ್ತಿತ ಕಲಿಕೆಯ ಅನುಭವಗಳನ್ನು ಅಭಿವೃದ್ಧಿಪಡಿಸಲು ತಮ್ಮ ಬದ್ಧತೆಯನ್ನು ತಿಳಿಸುವ ಉದ್ದೇಶದಿಂದ ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು, ಕಲಿಕಾ ಸಾಮಗ್ರಿಗಳ ವಿನಿಮಯ, ವೃತ್ತಿಪರ ಮತ್ತು ವೈಯಕ್ತಿಕ ಅಬಿವೃದ್ಧಿಗೆ ಕಾರಣವಾಗುವ ಕಾರ್ಯಾಗಾರಗಳು ಮತ್ತು ತರಬೇತಿಗಳನ್ನು ನಡೆಸುವುದು, ಎರಡು ಸಂಸ್ಥೆಗಳು ಶೈಕ್ಷಣಿಕ ಫಲಿತಾಂಶವನ್ನು ಹೆಚ್ಚಿಸಲು, ನವೀನ ಚಿಂತನೆಯನ್ನು ಬೆಳೆಸಲು ಮತ್ತು ವಿಕಸನಗೊಳ್ಳುತ್ತಿರುವ ಉದ್ಯಮದ ಬೇಡಿಕೆಗಳು ಮತ್ತು ಸ್ಪರ್ಧಾತ್ಮಕ ಕೆಲಸಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಸುಧಾರಿಸಲು ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ಈ ಒಡಂಬಡಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೋರೊನ್ಹಾ, ಎಂಬಿಎ ವಿಭಾಗದ ಆಡಳಿತ ಮತ್ತು ಉದ್ಯೋಗಾವಕಾಶ ಅಧಿಕಾರಿ ವಿದ್ಯಾ ಭಟ್, ಐಎಸ್ಟಿಡಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.












