ಉಡುಪಿ: ರಾಷ್ಟ್ರೀಯ ವಾಲಿಬಾಲ್ ಪಂದ್ಯಕೂಟಕ್ಕೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ದಲಿತ ವಿದ್ಯಾರ್ಥಿ ಸುಜಿತ್ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ಜಸೀರ್’ನನ್ನು ಜಿಲ್ಲಾಧಿಕಾರಿ ಅವರ ಶಿಫಾರಸಿನ ಮೇರೆಗೆ ಕೈಬಿಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಜಿಲ್ಲಾಧಿಕಾರಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರದ ರಾಜಕೀಯ ವ್ಯಕ್ತಿಯ ಪ್ರಭಾವಕ್ಕೆ ಮಣಿದು ಇಬ್ಬರು ಪ್ರತಿಭಾವಂತ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಅವರು, ಜಿಲ್ಲಾಧಿಕಾರಿಯವರು ರಾಜಕೀಯ ಒತ್ತಡದ ಮೇರೆಗೆ ಸಭೆ ನಡೆಸಿ, ಆಯ್ಕೆ ಪಟ್ಟಿ ಬದಲಾವಣೆ ಮಾಡಿದ್ದಾರೆ. ಇನ್ನೋರ್ವ ವಿದ್ಯಾರ್ಥಿಯ ದೂರು ಬಂದ ಕಾರಣ ಬದಲಾಯಿಸಿದ್ದೇವೆ ಎಂದು ಹೇಳುತ್ತಾರೆ.
ಜಿಲ್ಲಾಧಿಕಾರಿಯವರು ಪಟ್ಟಿ ಬದಲಾವಣೆ ಕುರಿತು ಸೂಕ್ತವಾದ ಕಾರಣ ತಿಳಿಸಬೇಕು. ಇಲ್ಲದಿದ್ದರೆ ಮತ್ತಷ್ಟು ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.