ಉಡುಪಿ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದಿರುವುದನ್ನು ಖಂಡಿಸಿ ರೈತರಿಂದ ಪ್ರತಿಭಟನೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ 3 ಸಾವಿರ ರೂ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು, ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಭತ್ತ ಬೆಳೆಯುವ ಜಿಲ್ಲೆಯ ರೈತರು ಬಹಳ ಸಂಕಷ್ಟಕರ ಪರಿಸ್ಥಿತಿ ಎದುರಿಸಿದ್ದಾರೆ. ಎಲ್ಲ ರೈತರಿಗೆ ನಷ್ಟವಾಗಿದೆ.

ಈಗ ಮಾರುಕಟ್ಟೆ ದರ, ಬೆಳೆ ಬೆಳೆಯಲು ಮಾಡಿದ ಖರ್ಚಿನ ಮಟ್ಟಕ್ಕೂ ಇಲ್ಲ. ಮಾರುಕಟ್ಟೆಯಲ್ಲಿ ಕಿಲೋಗೆ ರೂ.18 ರಿಂದ 22ರ ದರದಲ್ಲಿ ಭತ್ತ ಮಾರಾಟ ಮಾಡಿ, ಕೃಷಿಕ ಜೀವನ ನಡೆಸಲು ಸಾಧ್ಯವೇ ಇಲ್ಲ. ಸರಕಾರವು ಸಕಾಲದಲ್ಲಿ ರೈತರ ನೆರವಿಗೆ ಬಾರದಿದ್ದಲ್ಲಿ ಈಗಾಗಲೆ ಕೃಷಿ ಮಾಡಲು ಹಿಂಜರಿಯುತ್ತಿರುವ ಜಿಲ್ಲೆಯ ಕೃಷಿಕರು ಮತ್ತಷ್ಟು ಅತಂತ್ರರಾಗಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಭತ್ತ ಬೆಳೆಯುವ ಕೃಷಿಕರನ್ನು ಉಳಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವು ತಕ್ಷಣದಿಂದಲೇ ಕ್ವಿಂಟಾಲಿಗೆ ರೂ.3 ಸಾವಿರದಂತೆ ಬೆಂಬಲ ಬೆಲೆ ನೀಡಿ, ತಾಲೂಕು ಕೇಂದ್ರಗಳಲ್ಲಿ ಭತ್ತ ಕೇಂದ್ರಗಳನ್ನು ಸ್ಥಾಪಿಸಬೇಕು. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಸರಕಾರವು ಬೆಂಬಲ ಬೆಲ ಘೋಷಣೆ ಮಾಡಿ ಭತ್ತ ಖರೀದಿಸುವ ವ್ಯವಸ್ಥೆಯಾಗಬೇಕು.

ಉಡುಪಿ ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಹೋಬಳಿ ಕೇಂದ್ರಗಳಲ್ಲಿ ಭತ್ತ ನಾಟಿ ಮತ್ತು ಕಟಾವು ಯಂತ್ರಗಳು ಬಾಡಿಗೆ ಆಧಾರದಲ್ಲಿ ರೈತರಿಗೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೃಷಿಕ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ ಹೆರ್ಗಾ, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ರೈತ ಧ್ವನಿ ಕೋಟದ ಅಧ್ಯಕ್ಷ ಜಯರಾಂ ಶೆಟ್ಟಿ, ತಿಮ್ಮ ಕಾಂಚನ್, ಭಾಸ್ಕರ ಶೆಟ್ಟಿ ಮಣೂರು, ಶಿವಮೂರ್ತಿ ಉಪಾಧ್ಯಾಯ ಉಪಸ್ಥಿತರಿದ್ದರು.