ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಎರಡು ದಿನಗಳ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್ ಮತ್ತು ಸ್ಮಾರ್ಟ್ ಕಮ್ಯುನಿಕೇಷನ್ (ಸಿಐಎಸ್ಸಿ-2024) ಮತ್ತು ಮೆಟೀರಿಯಲ್, ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ಮ್ಯಾನ್ಯುಫಾಕ್ಚ್ಚರಿಂಗ್ (ಎಮ್ಇಇಎಮ್ಎಸ್ – 2024) ಎಂಬ ವಿಷಯದ ಕುರಿತು ಪ್ರತಿಷ್ಠಿತ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭವು 21 ಡಿಸೆಂಬರ್ 2024 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ ಭಾಗವಹಿಸಲು ದೇಶ – ವಿದೇಶಗಳಿಂದ ಒಟ್ಟು 237 ಪ್ರಬಂಧಗಳು ಬಂದಿದ್ದು, ಅಂತಿಮವಾಗಿ 12 ಪ್ರಬಂಧಗಳನ್ನು ಆಯ್ಕೆ ಮಾಡಲಾಯಿತು. ಪ್ರಬಂಧ ಮಂಡನೆಯ ಜತೆಗೆ 6 ಹೆಸರಾಂತ ಸಂಶೋಧಕರಿಂದ ಆಧುನಿಕ ತಂತ್ರಜ್ಞಾನದ ಉಪನ್ಯಾಸ ಏರ್ಪಡಿಸಲಾಗಿದ್ದು ಈ ಸಮ್ಮೇಳನದ ವಿಶೇಷತೆ.
ಸಮಾರಂಭದಲ್ಲಿ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಯು ಸಿ ನಿರಂಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರು ಮಾತನಾಡಿ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ಎರಡು ಮುಖ್ಯ ಲಾಭಗಳನ್ನು ಪ್ರಸ್ತಾಪಿಸಿದರು. ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ಜ್ಞಾನವನ್ನು ಸಂಪಾದಿಸುವುದು ಮತ್ತು ಶ್ರೇಷ್ಠ ವೃತ್ತಿಪರರೊಂದಿಗೆ ಸಂಪರ್ಕವನ್ನು ನಿರ್ಮಿಸುವುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ವೇದಿಕೆಯನ್ನು ಒದಗಿಸಿದಕ್ಕಾಗಿ ಸಂಸ್ಥೆಯನ್ನು ಶ್ಲಾಘಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಪ್ರಬಂಧ ಪುರಸ್ಕಾರವನ್ನು ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಘೋಷಿಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಸುನಿಲ್ ಹಲ್ದಾಂಕರ್ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಸ್ವಾತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಡಾ. ಶಿಲ್ಪಾ ಕಾಮತ್ ಸ್ವಾಗತಿಸಿದರು. ಶ್ರೀ ಅನಂತ್ ಮಲ್ಯ ಮತ್ತು ಕುಮಾರಿ ಸ್ತುತಿ ಕಾರ್ಯಕ್ರಮ ನಿರೂಪಿಸಿದರು.