ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮತಾಂತರ ಗದ್ದಲ

ಉಡುಪಿ: ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಜೋಡುಕಟ್ಟೆಯ ಡಯಾನ ಹೋಟೆಲ್ ಸಮೀಪದ ಪ್ರಾರ್ಥನ ಮಂದಿರವೊಂದರಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ವಿಷಯ ಭಾರೀ ಗದ್ದಲಕ್ಕೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಆಡಳಿತ ಸದಸ್ಯ ವಿಜಯ ಕೊಡವೂರು ಅವರು, ಈ ಕಟ್ಟಡದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ಅನುಮಾನವಿದೆ. ಶಿಕ್ಷಣ ನೀಡುವುದರ ಜೊತೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ..? ನಗರಸಭೆಯ ಕಡತಗಳಲ್ಲಿ ಈ ಕಟ್ಟಡಕ್ಕೆ ಯಾವ ಪರವಾನಿಗೆ ನೀಡಲಾಗಿದೆ ಎಂದು‌ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ‌ ಯಶ್ ಪಾಲ್ ಸುವರ್ಣ ಅವರು, ಈ ಪ್ರಾರ್ಥನ ಮಂದಿರದ ಆವರಣಗೋಡೆಯಲ್ಲಿ ಪ್ರಚೋದನಕಾರಿ ಬರಹಗಳನ್ನು ಬರೆಯಲಾಗಿದ್ದು, ತಕ್ಷಣ ಅವುಗಳನ್ನು ತೆರವುಗೊಳಿಸಬೇಕು. ಮನೆ ಕಟ್ಟಲು ಅನುಮತಿ ಪಡೆದು ಅದನ್ನು ವಿಸ್ತರಣೆ ಮಾಡಿ ಮತಾಂತರ ಕೇಂದ್ರವನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ. ಅದು ಕಾನೂನು ಬಾಹಿರವಾಗಿದ್ದು, ಕೂಡಲೇ ಅಕ್ರಮ ಕಟ್ಟಡವನ್ನು ತೆರವು ಮಾಡಬೇಕು ಎಂದು ಸೂಚನೆ ನೀಡಿದರು.

ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ ಅವರು, 1,126 ಚದರ ಅಡಿಯ ವಸತಿಗೃಹ ಅನುಮತಿ ಇದೆ. ದೂರಿನ ಮೇರೆಗೆ ಅಧಿಕಾರಿಗಳ ಜೊತೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ, 4,000 ಚದರ ಅಡಿಕ್ಕಿಂತ ಹೆಚ್ಚಿರುವುದು ಪತ್ತೆಯಾಗಿದೆ. ಈ ಬಗ್ಗೆ ಕಟ್ಟಡ ಮಾಲೀಕರ ಬಳಿ ಯಾವೆಲ್ಲಾ ದಾಖಲೆ ಇದೆ ಎಂಬುದನ್ನು ಕೇಳಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ದಾಖಲೆ ನಗರಸಭೆಯಲ್ಲಿರಬೇಕು. ಮಾಲೀಕರ ಬಳಿ ಇದೆಯೇ ಎಂದು ಕಾಯಬಾರದು. ಅನಧಿಕೃತ ಕಟ್ಟಡವಾದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ವಿಪಕ್ಷ ನಾಯಕ ರಮೇಶ್ ಕಾಂಚನ್ ಪ್ರತಿಕ್ರಿಯಿಸಿ, ಕಟ್ಟಡ ಕಟ್ಟಲು ಅನುಮತಿ ಪಡೆದ ಬಳಿಕ ಅವರಿಗೆ ಬೇಕಾದ ಹಾಗೆ ಕಟ್ಟಡ ನಿರ್ಮಾಣ ಮಾಡುತ್ತಾರೆ. ಹೀಗಾಗಿ ಕಟ್ಟಡ ತೆರವುಗೊಳಿಸಿ ಅನಗತ್ಯ ಗೊಂದಲಕ್ಕೆ ಎಡೆಮಾಡಿ ಕೊಡಬೇಡಿ. ಮತಾಂತರ ನಡೆಯುತ್ತಿದ್ದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಪರವಾನಗಿ ಪಡೆದುಕೊಂಡ ಚದರ ಅಡಕ್ಕಿಂತ ಹೆಚ್ಚುವರಿಯಾಗಿ ವಿಸ್ತರಿಸಿಕೊಂಡ ಅನೇಕ ದೇವಸ್ಥಾನ, ಸಭಾಂಗಣಗಳಿವೆ. ಅದರ ಬಗ್ಗೆ ಪಟ್ಟಿ ಕೊಡುತ್ತೇನೆ, ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ವಿಜಯ್ ಕೊಡವೂರು, ಗಿರೀಶ್ ಅಂಚನ್ ಹಾಗೂ ರಮೇಶ್ ಕಾಂಚನ್ ನಡುವೆ ತೀವ್ರ ವಾಗ್ವಾದ ನಡೆಯಿತು.