ಉಡುಪಿ: ಶೌರ್ಯವೆಂದರೆ “ಸಾಧನೆ” ಶೌರ್ಯದ ಸ್ವಯಂಸೇವಕರು ಇಲಾಖೆಗಳ ಜೊತೆಯಾಗಿ ಸೇವೆ ನೀಡುತ್ತಿರುವುದು ಇಲಾಖೆಗಳಿಗೆ ಆನೆ ಬಲ ಎಂದು ತಿಳಿದಿದ್ದೇನೆ ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ವಿನಾಯಕ ಕಲ್ಗುಟ್ಕರ್ ಹೇಳಿದರು. ಉಡುಪಿ ಪ್ರಗತಿ ಸೌಧದಲ್ಲಿ ನಡೆದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿಪತ್ತು ನಡೆಯುವ ವಿವಿಧ ಸಂದರ್ಭಗಳಲ್ಲಿ ಇಲಾಖೆಯ ಸೀಮಿತ ಸಿಬ್ಬಂದಿ ಅಥವಾ ಕ್ರಮಿಸುವ ಹಾದಿ ದೂರವಿರುವ ಸಂದರ್ಭಗಳಲ್ಲಿ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಲು ವಿಳಂಬವಾಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಶೌರ್ಯ ಸ್ವಯಂ ಸೇವಕರು ಧಾವಿಸಿ ಜನರಿಗೆ ಪ್ರಥಮ ಚಿಕಿತ್ಸೆಯ ರೀತಿಯಲ್ಲಿ ಸ್ಪಂದನೆ ನೀಡುವ ಕಲ್ಪನೆ ಅದ್ಭುತ ಎಂದು ಶ್ಲಾಘಿಸಿ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭ ಶೌರ್ಯ ಘಟಕದ ಸ್ವಯಂಸೇವಕರ ಸಹಕಾರವನ್ನು ಪಡೆಯಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ತಹಸೀಲ್ದಾರ್ ಪಿ. ಆರ್. ಗುರುರಾಜ್ ಪ್ರಸ್ತುತ ವರ್ಷ ಮಳೆಯಿಂದ ಹೆಚ್ಚು ಪ್ರಾಕೃತಿಕ ದುರಂತಗಳು ಸಂಭವಿಸುತ್ತಿದ್ದು ಈ ನಿಟ್ಟಿನಲ್ಲಿ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರ ಸೇವೆಗೆ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಆಶಯ ನುಡಿಗಳ ಮೂಲಕ ಪ್ರಸ್ತಾವಸುತ್ತಾ ಧರ್ಮಸ್ಥಳ ಶೌರ್ಯ ಘಟಕವು ರಾಜ್ಯಾದ್ಯಂತ 10500 ಜನ ಸ್ವಯಂ ಸೇವಕರ ತಂಡವಾಗಿದ್ದು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರಿಗೆ ವಿವಿಧ ವಿಪತ್ತು ಉಪಕರಣಗಳು ಮತ್ತು ತರಬೇತಿಗಳನ್ನು ತಾಲೂಕ ಮಟ್ಟದಲ್ಲಿ ನೀಡಲಾಗುವುದು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಇವರು ಸೇವೆ ಸಲ್ಲಿಸಲಿದ್ದಾರೆ ಎಂದರು.
ಮಂಗಳೂರು ಉಷಾ ಫೈರ್ ಸ್ಟೇಷನ್ ಕಂಪನಿಯ ಸಂತೋಷ ಪೀಟರ್ ಡಿಸೋಜಾ ವಿಪತ್ತು ನಿರ್ವಹಣಾ ವೃತ್ತಿಪರ ರವಿ ಬಿಜನಹಳ್ಳಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.
ಉಡುಪಿ ತಾಲೂಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಅಧ್ಯಕ್ಷತೆವಹಿಸಿದ್ದರು.
ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ರವರು ಸಮವಸ್ತ್ರ ವಿತರಣೆ ಮಾಡಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಟ್ಟಾಡಿ ನವೀನ್ಚಂದ ಶೆಟ್ಟಿ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಉಡುಪಿ ತಾಲೂಕ ಕೇಂದ್ರ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.
ಉಡುಪಿ ತಾಲೂಕ ಯೋಜನಾಧಿಕಾರಿ ರಾಮ ಸ್ವಾಗತಿಸಿ ಮೇಲ್ವಿಚಾರಕಿ ಪ್ರೇಮ ವಂದಿಸಿದರು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.