ಉಡುಪಿ: ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಸ್ವಲ್ಪಮಟ್ಟಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಉಡುಪಿಯ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್ ಆರ್ ನಿಧಿಯ ಮೂಲಕ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಖರೀದಿಸಿ ಉಡುಪಿ ಜಿಲ್ಲಾ ಪಂಚಾಯತ್ ಗೆ ನೀಡಲು ನಿರ್ಧರಿಸಿದೆ.
ಅದರಂತೆ ಇದೇ ಡಿಸೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಶ್ಯಾಮ್ ರಾಜ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಅವರು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮತ್ತು ಜಿಪಂ ಸಿಇಓ ಪ್ರತೀಕ್ ಬಾಯಲ್ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಎಲೆಕ್ಟ್ರಿಕ್ ಆಟೋಗಳನ್ನು ಹಸ್ತಾಂತರಿಸಲಿದ್ದಾರೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ, ಸ್ವಸ್ಥ ಭಾರತ ಎಂಬ ಗುರಿಯೊಂದಿಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹತ್ತಿರದ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಕೇಶವನ್, ಕೃಷ್ಣ ರಾವ್, ಚಕ್ರಿ ಹೆಗ್ಡೆ ಇದ್ದರು.












