ಉಡುಪಿ: ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಸಮಸ್ತ ಬಂಟ ಸಮಾಜದ ಅಭಿನಂದನೆ.

ಉಡುಪಿ : ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ಇದರ ಉಡುಪಿ ತಾಲೂಕು ಸಮಿತಿ ವತಿಯಿಂದ ಜಾನಪದ, ರಂಗಭೂಮಿ, ಸಾಂಸ್ಕೃತಿ, ಧಾರ್ಮಿಕ ಮೊದಲಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಕ್ರೀಯರಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಖ್ಯಾತರಾಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ‘ಬಂಟಕುಲ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು.

ಸಮಿತಿ ವತಿಯಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಭಾನುವಾರ ನಡೆದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಬಡಗುತಿಟ್ಟು ಯಕ್ಷಗಾನ ‘ಜ್ವಾಲಾ ಪ್ರತಾಪ ‘ ಪ್ರದರ್ಶನದ ಸಂದರ್ಭದಲ್ಲಿ ಈ ಸನ್ಮಾನ ನಡೆಯಿತು.

ಈ ಸಂದರ್ಭದಲ್ಲಿ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ತಾಲೂಕು ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ, ಉಪ ಸಂಚಾಲಕ ದಿನೇಶ್ ಹೆಗ್ಡೆ, ನಿಕಟ ಪೂರ್ವ ಸಂಚಾಲಕ ಜಯರಾಜ್ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಭುಜಂಗ ಶೆಟ್ಟಿ, ಮಿಥುನ್ ಹೆಗ್ಡೆ, ಸುಭಾಸ್ ಬಲ್ಲಾಳ್, ಶ್ರೀಧರ ಶೆಟ್ಟಿ, ಇಂದಿರಾ ಸುಬ್ಬಯ್ಯ ಹೆಗ್ಡೆ, ನಿತೀಶ್ ಕುಮಾರ್ ಶೆಟ್ಟಿ, ಹರೀಶ್ ಚೆರ್ಕಾಡಿ, ಕಿಶೋರ್ ಶೆಟ್ಟಿ, ಪ್ರಸಾದ್ ಮಾರಾಳ್ಳಿ, ನಿರುಪಮಾ ಹೆಗ್ಡೆ ಹಾಗೂ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಅವರು ಉಪಸ್ಥಿತರಿದ್ದರು.

ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಉದ್ಯಮ ಕ್ಷೇತ್ರದಲ್ಲಿ ಅಪಾರ ಯಶಸ್ಸು ಪಡೆದು ‘ಉದ್ಯಮ ರತ್ನರಾಗಿ’, ಲಯನ್ಸ್ ೩೧೭ಸಿ ಜಿಲ್ಲಾ ಗವರ್ನರ್ ಸೇರಿದಂತೆ ಹತ್ತು ಹಲವಾರು ಉನ್ನತ ಸ್ಥಾನಗಳಲ್ಲಿ ಅಲಂಕರಿಸಿ ‘ಲಯನ್ ರತ್ನ’ ರಾಗಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ, ಸ್ವತ: ಕಲಾವಿದರಾಗಿ ನೂರಾರು ಪಾತ್ರಗಳನ್ನು ಮಾಡಿರುವುದು ಮಾತ್ರವಲ್ಲದೇ ಯಕ್ಷಗಾನ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ‘ಯಕ್ಷರತ್ನ’ರಾಗಿ, ಚಿಂತನೆಗೆ ಹಚ್ಚುವಂತಹ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದಲ್ಲದೆ, ಶಾಲಾ ಕಾಲೇಜುಗಳಿಗೆ ತೆರಳಿ 40,000ಕ್ಕೂ ಅಧಿಕ ಪ್ರತಿಗಳನ್ನು ಉಚಿತವಾಗಿ ಹಂಚಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗೆ ಭಾಜನರಾಗುವ ಮೂಲಕ ‘ಸಾಹಿತ್ಯ ರತ್ನ’ರಾಗಿ, ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿದಲ್ಲದೆ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಜಾನಪದ ಕಲಾವಿದರಿಗೆ ಸಹಾಯಹಸ್ತ ಚಾಚಿ ನೈಜ ‘ಸಂಸ್ಕೃತಿ ರತ್ನ ‘ ರಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾವೇರಿ ಹಾಗೂ ಇಂಡಿಯನ್ ವರ್ಚೂವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ವತಿಯಿಂದ ಗೌರವ ಡಾಕ್ಟರೇಟ್ ಪಡೆದು ‘ಸಾಧನಾ ರತ್ನ’ರಾಗಿ ಮಿಂಚಿರುವುದನ್ನು ಉಲ್ಲೇಖಿಸಿ ಅಭಿನಂದಿಸಲಾಯಿತು.