ಉಡುಪಿ: ಜ.1ರಿಂದ ಬಾಳಿಗಾ ಆಸ್ಪತ್ರೆಯಲ್ಲಿ 33ನೇ ಮದ್ಯವ್ಯಸನ ವಿಮುಕ್ತಿ ಶಿಬಿರ

ಉಡುಪಿ: ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ‌ ಅವರ ನೇತೃತ್ವದಲ್ಲಿ ಜನವರಿ 1ರಿಂದ 10ರ ವರೆಗೆ 33ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಮನೋವೈದ್ಯ ಡಾ. ದೀಪಕ್ ಮಲ್ಯ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.1ರಂದು ಸಂಜೆ 4 ಗಂಟೆಗೆ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್. ಬಿ. ವಿಜಯ್ ಬಲ್ಲಾಳ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಜ.10ರಂದು ಬೆಳಿಗ್ಗೆ 10ಗಂಟೆಗೆ ಶಿಬಿರದ ಸಮಾರೋಪ ಸಮಾರಂಭದ ನಡೆಯಲಿದೆ ಎಂದರು.

ಶಿಬಿರಕ್ಕೆ ದಾಖಲಾಗುವ ಶಿಬಿರಾರ್ಥಿಗಳಿಂದ 500 ರೂ ಶುಲ್ಕವನ್ನು ಪಡೆಯುತ್ತಿದ್ದು, ಶಿಬಿರಾರ್ಥಿಗಳಿಗೆ ತಗಲುವ ಊಟ, ವಸತಿ, ಚಿಕಿತ್ಸೆಯ ವೆಚ್ಚವನ್ನು ಕಮಲ್ ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್ ಭರಿಸುತ್ತಿದೆ. ಶಿಬಿರಾರ್ಥಿಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಮದ್ಯ ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳು ಮತ್ತು ಜೀವನ ಶೈಲಿ ಬದಲಾವಣೆ ಕುರಿತು ನುರಿತ ತಜ್ಞರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿವಿಧ ಕಾಲೇಜುಗಳಿಂದ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಚಿಕಿತ್ಸೆಯಲ್ಲಿ ವಿ.ವಿ.ಯ ಮಹತ್ವವನ್ನು ಪರಿಗಣಿಸಿ ಪ್ರತಿದಿನ ವಿ.ಎ. (ಅನಾಮಿಕ ಅಮಲಿಗಳ) ಸದಸ್ಯರಿಂದ ಒಂದು ಗಂಟೆಯ ಚರ್ಚೆ ಮತ್ತು ಮದ್ಯ ವಿಮುಕ್ತ ಜೀವನ ನಡೆಸುವ ಬಗ್ಗೆ ಮಾಹಿತಿ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ರಾತ್ರಿ 7 ರ ನಂತರ ಪ್ರತಿ ದಿನ ಭಜನೆ ಮತ್ತು ಧಾರ್ಮಿಕ ವಿಚಾರಗಳನ್ನು ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿಬಿರದಿಂದ ತೆರಳಿದ ನಂತರವೂ ಶಿಬಿರಾರ್ಥಿಗಳ ಪ್ರಗತಿಯನ್ನು ನಮ್ಮ ಸಮುದಾಯ ಕಾರ್ಯಕರ್ತರು ಮನೆ ಭೇಟಿ, ದೂರವಾಣಿ ಕರೆ ಮತ್ತು ಪತ್ರಗಳನ್ನು ಬರೆಯುವ ಮೂಲಕ ಅವರ ಮದ್ಯಮುಕ್ತ ಜೀವನವನ್ನು ನಿರಂತರವಾಗಿ ಪರಿಶೀಲಿಸುತ್ತಾರೆ. ಇದರೊಂದಿಗೆ ಒಂದು ವರ್ಷದ ಅವಧಿಯವರೆಗೆ ಮರುಭೇಟಿ ದಿನಾಂಕವನ್ನು ನಿರ್ಧರಿಸಿ ಪ್ರತಿ ತಿಂಗಳು ಶಿಬಿರಾರ್ಥಿಗಳನ್ನು ಪರೀಕ್ಷಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸೌಜನ್ಯ ಶೆಟ್ಟಿ, ವೈದ್ಯರಾದ ನಾಗರಾಜ ಮೂರ್ತಿ, ಡಾ. ಮಾನಸ್ ಉಪಸ್ಥಿತರಿದ್ದರು.