ಉಡುಪಿ: ಕಾಪು ತಾಲೂಕಿನ ಕಟಪಾಡಿಯಲ್ಲಿ ಕೃಷಿ ಉತ್ಪನ್ನಗಳಿಂದ ಅಲಂಕಾರಗೊಂಡ ಆಟೋ ರಿಕ್ಷಾವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಸಾರ್ವಜನಿಕರಲ್ಲಿ ಕೃಷಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಟಪಾಡಿಯ ರಿಕ್ಷಾ ಚಾಲಕ ಜಯಕರ ಕುಂದರ್ ಅವರು ತಮ್ಮ ರಿಕ್ಷಾವನ್ನು ಕೃಷಿ ಪರಿಕರಗಳಿಂದ ಶೃಂಗಾರಿಸಿದ್ದಾರೆ. ಜಯಕರ ಅವರ ಆಟೋ ಇದೀಗ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ.
ಕಳೆದ 10 ವರ್ಷಗಳಿಂದ ತಾವು ದುಡಿಯುವ ರಿಕ್ಷಾವನ್ನು ವಿಶೇಷ ಆಕರ್ಷಣೀಯ ಅಲಂಕಾರದ ಮೂಲಕ ಸದಾ ಜನಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬರುತ್ತಿರುವ ಸಂಗಮ ಕಲಾವಿದ ತಂಡದ ಸದಸ್ಯ ಜಯಕರ ಕುಂದರ್ ಅವರು, ಈ ಬಾರಿ ಕೃಷಿ ಉತ್ಪನ್ನಗಳಿಂದ ರಿಕ್ಷಾವನ್ನು ಸಿಂಗರಿಸಿ ಗಮನ ಸೆಳೆದಿದ್ದಾರೆ.
ಭತ್ತದ ತೆನೆ, ಬೈಹುಲ್ಲಿನಿಂದಲೇ ತನ್ನ ರಿಕ್ಷಾವನ್ನು ಅಲಂಕರಿಸಿ ರಿಕ್ಷಾದ ಮುಂಭಾಗದಲ್ಲಿ ಮೈಸೂರು ದಸರಾದ ಅಂಬಾರಿ ಹೊರುವ ಗಜಗಾಂಭೀರ್ಯದ ಅರ್ಜುನನ ಅಂಬಾರಿ ಹೊತ್ತ ಆನೆಯ ಸ್ತಬ್ಧಚಿತ್ರವನ್ನೂ ಬೈಹುಲ್ಲಿನ ಮೂಲಕ ಸಿದ್ಧಪಡಿಸಿದ್ದಾರೆ. ರಿಕ್ಷಾ ಸೀಟನ್ನು ಓಲಿ ಚಾಪೆಯಿಂದ ಸಿದ್ಧಪಡಿಸಿದ್ದು, ಬೆತ್ತದ ಬುಟ್ಟಿ, ಸಹಿತ ಇತರೇ ಮನೆ ಬಳಕೆಯ ಕರಕುಶಲವಸ್ತುಗಳನ್ನು ರಿಕ್ಷಾದ ಒಳಭಾಗದಲ್ಲಿ ಅಲಂಕಾರಿಕವಾಗಿ ಬಳಸಿಕೊಂಡಿದ್ದು, ಕುಲಕಸುಬುಗಳ ಜನಜಾಗೃತಿಯನ್ನೂ ಮೂಡಿಸಿ ಪ್ರಾಕೃತಿಕ ಸಿರಿ ಸೊಬಗನ್ನು ಪ್ರದರ್ಶಿಸಿದ್ದಾರೆ.