ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆ; ಮೂವರ ಬಂಧನ

ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಎಂದು ಗುರುತಿಸಲಾಗಿದೆ.
ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.

ಈ ಮೂವರು ಎ.23ರಂದು ಸಂಜೆ ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಪಾರ್ಕರ್ ಎಂಬ ಬೆಟ್ಟಿಂಗ್ ಮೊಬೈಲ್ ಆ್ಯಪ್ ಸಹಾಯದಿಂದ ತಮ್ಮ ಸ್ಮಾರ್ಟ್ ಫೋನ್ ಮೂಲಕ ಐಪಿಎಲ್‌ನಲ್ಲಿ ಹೈದರಾಬಾದ್‌ನ ಸನ್‌ರೈಸರ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ನಡೆದ ಟಿ20 ಮ್ಯಾಚ್‌ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್‌ನ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು.

ಬಂಧಿತರಿಂದ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಂಗ್ರಹಿಸಿದ್ದ 81,700ರೂ. ನಗದು, 1.35 ಲಕ್ಷ ರೂ. ಮೌಲ್ಯದ 4 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು ಸಹಿತ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.