ಉಡುಪಿ: ಉಡುಪಿ ಶ್ರೀಕೃಷ್ಣಮಠ ಪುತ್ತಿಗೆ ಪರ್ಯಾಯ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈಭವ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಲಾಯಿತು.
ಶ್ರೀಕೃಷ್ಣ ಮಾಸೋತ್ಸವ ಉದ್ಘಾಟಿಸಿ ಮಾತನಾಡಿದ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಗವದ್ಗೀತೆ ನಮ್ಮ ದೇಶಕ್ಕೆ ಸಂಸ್ಕೃತಿಯನ್ನು ತಿಳಿಸುವ ಬಹುದೊಡ್ಡ ಸಂಪತ್ತು. ಕೃಷ್ಣ ದೇವರನ್ನು ಪ್ರತಿದಿನ ಉಪಾಸನೆ ಮಾಡುವ ಕೆಲಸವಾಗಬೇಕು. ನಮ್ಮ ಧರ್ಮದ ಮೇಲೆ ಪ್ರಹಾರವಾದಾಗ ಅತಿವೃಷ್ಟಿ, ಅನಾವೃಷ್ಟಿ ಆಗುತ್ತದೆ. ಧರ್ಮ, ಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಿದರೆ ಅನಾಹುತಗಳು ಸಂಭವಿಸುತ್ತದೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಶ್ರೀಕೃಷ್ಣ ಉತ್ಸವ ಮಹತ್ತರ ಉತ್ಸವವಾಗಿದೆ. ಶಾಸ್ತ್ರಗಳ ಪ್ರಕಾರ ಅತ್ಯಂತ ಉನ್ನತ ಮಹೋತ್ಸವವಾಗಿದೆ ಎಂದರು.
ಭಂಡಾರಕೇರಿ ಮಠಾಧೀಶರಾದ ವಿದ್ಯೇಶ ತೀರ್ಥ ಶ್ರೀಪಾದರು ಮಾತನಾಡಿ, ಕರ್ಮಯೋಗ, ಜ್ಞಾನ ಯೋಗ, ಭಕ್ತಿಯೋಗದ ಬಗ್ಗೆ ವಿಶೇಷವಾದ ಗಮನ ಹರಿಸಬೇಕು. ಉತ್ಸವದ ಮಾರ್ಗದಲ್ಲಿ ಜನರು ಪಾಲ್ಗೊಂಡು ಭಗವಂತನ ಪ್ರೀತಿಗೆ ಪಾತ್ರವಾಗಬಹುದು ಎಂದರು.
ಪುತ್ರಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.