ಉಡುಪಿ: ಸಾಮಾನ್ಯವಾಗಿ ಅಂತ್ಯಸಂಸ್ಕಾರದಂತಹ ಕ್ರಿಯೆಗಳನ್ನು ಗಂಡಸರೇ ನಡೆಸುವುದು ವಾಡಿಕೆ.ಆದರೆ ಉಡುಪಿಯಲ್ಲಿ ಮಹಿಳೆಯರು ಸೇರಿ ಅಂತ್ಯಸಂಸ್ಕಾರ ನಡೆಸಿ ಗಮನ ಸೆಳೆದಿದ್ದಾರೆ.
ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳಿಂದ ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವನ್ನು ಮಹಿಳೆಯರೇ ಮುಂದೆ ನಿಂತು ನಡೆಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಈ ಮಾನವೀಯ ಕಾರ್ಯದ ನೇತೃತ್ವ ವಹಿಸಿದ್ದರು.ಶವ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ ಭಾಗಿಯಾಗಿ ಗಮನ ಸೆಳೆದರು.
ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಈ ಅಂತ್ಯ ಸಂಸ್ಕಾರ ನಡೆಯಿತು. ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾಸ್ಪತ್ರೆಯ ಡಾ.ರಮೇಶ್ ಕುಂದರ್ ಅವರು ಅಂತಿಮ ಪುಷ್ಪ ನಮನ ಸಮರ್ಪಿಸಿದರು. ನಗರ ಪೋಲಿಸ್ ಠಾಣೆಯ ಎ.ಎಸ್.ಐ ನವೀನ್ ದೇವಾಡಿಗ, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು.












